ನವದೆಹಲಿ, ಮಾ 17(DaijiworldNews/MS): ಬ್ರಿಟನ್ ದೇಶದಲ್ಲಿ ಭಾರತದ ವಿರುದ್ಧ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮಾತುಗಳು ದೇಶದ ಪ್ರಜಾಪ್ರಭುತ್ವವನ್ನು ಅವಮಾನಿಸುವಂತಿದೆಯೇ ಇಲ್ಲವೇ ಎಂದು ಪರಿಶೀಲನೆ ಮಾಡಲು ಸಂಸದೀಯ ಸಮಿತಿಯನ್ನು ರಚನೆ ಮಾಡಬೇಕು ಎಂದು ಬಿಜೆಪಿ ಲೋಕಸಭೆ ಸ್ಪೀಕರ್ ಅವರಿಗೆ ಮನವಿ ಸಲ್ಲಿಸಿದ್ದು ಈ ಮೂಲಕ ಸದನದಲ್ಲಿ ಕ್ಷಮೆಯಾಚಿಸದಿದ್ದರೆ ಅವರನ್ನು ಲೋಕಸಭೆಯಿಂದ ಅಮಾನತುಗೊಳಿಸುವ ಕ್ರಮಗಳನ್ನು ಆಡಳಿತಾರೂಢ ಬಿಜೆಪಿ ಪ್ರಾರಂಭಿಸಿದೆ.
ವಯನಾಡ್ ಸಂಸದರಾಗಿರುವ ರಾಹುಲ್ ಅವರನ್ನು ಸದನದಿಂದ ಅಮಾನತುಗೊಳಿಸುವ ಸಾಧ್ಯತೆಯ ಬಗ್ಗೆ ವಿಶೇಷ ಸಮಿತಿಯನ್ನು ರಚಿಸುವಂತೆ ಕೋರಿ ಪಕ್ಷವು ಈಗಾಗಲೇ ಸ್ಪೀಕರ್ ಓಂ ಬಿರ್ಲಾ ಅವರನ್ನು ಬಿಜೆಪಿ ಸಂಪರ್ಕಿಸಿದ್ದು, "ಈ ವಿಚಾರ ಕೇವಲ ಸಮಸ್ಯೆಯಲ್ಲ, ಅದಕ್ಕಿಂತ ಹೆಚ್ಚಿನದು" ಎಂದು ಹೇಳಿದೆ.
ರಾಹುಲ್ ಗಾಂಧಿ ಅವರ ಮಾತುಗಳು ವಿಷಪೂರಿತವಾಗಿದ್ದು, ಇದು ವ್ಯವಸ್ಥಿತವಾದ ಭಾರತ ವಿರೋಧಿ ಅಭಿಯಾನವಾಗಿದೆ. ಸಂಸತ್ತನ್ನು ಅವಮಾನಿಸುವ ಹಾಗೂ ನಿಂದಿಸುವ ಕ್ರಿಯೆಯಾಗಿದೆ. ಹೀಗಾಗಿ ಲೋಕಸಭೆಯ ಕಾರ್ಯಕಲಾಪ ನಿಯಮ 223ರ ಅಡಿಯಲ್ಲಿ ಸಂಸದೀಯ ಸಮಿತಿ ರಚನೆ ಮಾಡಬೇಕು ಎಂದು ಬಿಜೆಪಿಯ ಸಂಸದ ನಿಶಿಕಾಂತ್ ದುಬೆ ಸ್ಪೀಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.