ಮುಂಬೈ, ಮಾ 17 (DaijiworldNews/DB): ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿಗೆ 1 ಕೋಟಿ ರೂಪಾಯಿ ಲಂಚದ ಆಮಿಷವೊಡ್ಡಿ ಬೆದರಿಕೆ ಹಾಕಿದ್ದ ಮಹಿಳೆಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಡಿಸೈನರ್ ಅನಿಕ್ಷಾ ಅನಿಲ್ ಜೈಸಿಂಘಾನಿ ಬಂಧಿತ ಆರೋಪಿ. ತನ್ನ ತಂದೆ ಮೇಲಿದ್ದ ಕೇಸ್ನ್ನು ತೆಗೆದು ಹಾಕುವಂತೆ ಒತ್ತಾಯಿಸಿ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಅವರಿಗೆ ಈಕೆ 1 ಕೋಟಿ ರೂಪಾಯಿ ಲಂಚದ ಆಮಿಷವೊಡ್ಡಿದ್ದಳು ಎಂದು ಆರೋಪಿಸಲಾಗಿದೆ.
ಅನಿಕ್ಷಾ ಮತ್ತು ಆಕೆಯ ತಂದೆ ವಿರುದ್ದ ಫೆಬ್ರವರಿ 20 ರಂದು ಮಲಬಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆಕೆಯ ತಂದೆ ಇನ್ನೂ ತಲೆಮರೆಸಿಕೊಂಡಿದ್ದಾರೆ. ಈ ನಡುವೆ ಕಳೆದ 16 ತಿಂಗಳಿನಿಂದ ಅನಿಕ್ಷಾ ಅಮೃತಾ ಅವರೊಂದಿಗೆ ಸಂಪರ್ಕದಲ್ಲಿದ್ದು, ಅವರ ಮನೆಗೂ ಭೇಟಿ ನೀಡಿದ್ದಳು. ತಾನು ಬಟ್ಟೆ, ಆಭರಣ, ಪಾದರಕ್ಷೆಗಳ ವಿನ್ಯಾಸಕಿ ಎಂದು ಅಮೃತಾರಿಗೆ ತನ್ನನ್ನು ಪರಿಚಯಿಸಿಕೊಂಡಿದ್ದು, ತಾವು ವಿನ್ಯಾಸ ಮಾಡಿದ ಧಿರಿಸು, ಆಭರಣ, ಪಾದರಕ್ಷೆಗಳನ್ನು ಧರಿಸುವಂತೆ ಅಮೃತಾರಲ್ಲಿ ಕೇಳಿಕೊಂಡಿದ್ದಳು. ಇದರಿಂದ ಉತ್ಪನ್ನಗಳ ಪ್ರಚಾರಕ್ಕೆ ಸಹಕಾರಿಯಾಗುತ್ತದೆ ಎಂದಿದ್ದಳು.
ಅಮೃತಾ ನಂಬಿಕೆ ಗಳಿಸಿದ ಬಳಿಕ ಕೆಲವು ಬುಕ್ಕಿಗಳ ಮಾಹಿತಿ ನೀಡಿದ್ದ ಆಕೆ ಅವರ ಮುಖಾಂತರ ಹಣ ಗಳಿಸಬಹುದು ಎಂದು ಸಲಹೆ ನೀಡಿದ್ದಳು. ಅಲ್ಲದೆ ಇದೇ ವೇಳೆ ಅಮೃತಾಗೆ 1 ಕೋಟಿ ರೂ. ಆಫರ್ ಮಾಡಿದ್ದಾಳೆ. ಅಲ್ಲದೆ ಬ್ಲಾಕ್ಮೇಲ್ ಕೂಡಾ ಮಾಡಿದ್ದಾಳೆ. ಈಕೆಯ ವರ್ತನೆಯಿಂದ ಅಸಮಾಧಾನಗೊಂಡ ಅಮೃತಾ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.