ನವದೆಹಲಿ, ಮಾ 15 (DaijiworldNews/DB): ನಾನು ಬಿಜೆಪಿ ತ್ಯಜಿಸುತ್ತೇನೆಂಬುದು ಕೇವಲ ಊಹಾಪೋಹ ಅಷ್ಟೇ. ಬಿಜೆಪಿಗೆ ನನ್ನಿಂದ ಯಾವುದೇ ರೀತಿಯ ಅಪಚಾರ ಆಗುವುದಿಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.
ವಸತಿ ಇಲಾಖೆ ಸಂಬಂಧಿತ ಕೆಲಸದ ಹಿನ್ನೆಲೆಯಲ್ಲಿ ದೆಹಲಿಗೆ ಭೇಟಿ ನೀಡಿರುವ ಅವರು ಸಂಸತ್ ಭವನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಕರ್ನಾಟಕ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿಯಾಗಿ, ಬಿಜೆಪಿಯ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಸಹಿತ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದರು.
ನಾನು ಬಿಜೆಪಿ ತ್ಯಜಿಸುತ್ತೇನೆಂದು ಹೇಳಿದವರು ಯಾರು? ಈಗ ಹರಡಿರುವ ಸುದ್ದಿಗಳು ಯಾವುದೂ ನಿಜವಲ್ಲ. ಎಲ್ಲವೂ ಊಹಾಪೋಹಗಳಷ್ಟೇ. ಬಿಜೆಪಿಗೆ ನನ್ನಿಂದ ಯಾವುದೇ ಕೆಟ್ಟದಾಗುವುದಿಲ್ಲ ಎಂದರು.
ಇನ್ನು ವಿಜಯೇಂದ್ರ ಮತ್ತು ನನ್ನ ನಡುವೆ ಏನು ಮನಸ್ತಾಪ ಆಗಿದೆ ಎಂಬುದು ನನಗೆ ಗೊತ್ತಿಲ್ಲ. ಯಾವುದೇ ಗೊಂದಲಗಳಿದ್ದರೂ ಅವರಲ್ಲೇ ಕೇಳಿ. ನಾನು ಹೇಳಬೇಕಾದುದನ್ನು ಈಗಾಗಲೇ ಹೇಳಿಯಾಗಿದೆ. ನನಗೂ ಅವರಿಗೂ ವಯಸ್ಸೆಷ್ಟು ಎಂಬುದು ನಿಮಗೆ ಗೊತ್ತಿದೆ ಎಂದು ಹೇಳಿದರು.
ಇನ್ನು ನಾನು ಕಳೆದ ನಾಲ್ಕೂವರೆ ದಶಕಗಳಿಂದ ಜನಸೇವೆ ಮಾಡುತ್ತಾ ಬಂದವನು. ಅಭಿವೃದ್ದಿಯೆಡೆಗೆ ಗಮನ ನೀಡುತ್ತೇನೆಯೇ ಹೊರತು ಯಾವುದೇ ವ್ಯಾಮೋಹಗಳ ಬಲೆಗೆ ಬಿದ್ದಿಲ್ಲ. ಸಿದ್ದಗಂಗಾ ಮಠದೊಂದಿಗೂ ನನಗೆ ಮನಸ್ತಾಪ ಇಲ್ಲ. ಆದರೆ ಅಲ್ಲಿನ ಕಾರ್ಯಕ್ರಮಗಳಿಗೆ ಹೋಗದಿರುವುದು ನನ್ನ ವೈಯಕ್ತಿಕ ನಿರ್ಧಾರ. ಅದಕ್ಕೆ ವೃಥಾ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.