ವಿದಿಶಾ, ಮಾ 15 (DaijiworldNews/DB): ಸತತ 24 ಗಂಟೆಗಳ ಕಾರ್ಯಾಚರಣೆ ನಂತರವೂ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ ಬದುಕಿ ಬರಲಿಲ್ಲ.
ಲಟೇರಿ ತಹಸಿಲ್ ವ್ಯಾಪ್ತಿಯ ಖೇರ್ಖೇಡಿ ಪಥರ್ ಗ್ರಾಮದ ಲೋಕೇಶ್ ಅಹಿರ್ವಾರ್ (7) ಮೃತ ಬಾಲಕ. ಮಂಗಳವಾರ ಬೆಳಗ್ಗೆ ಬಾಲಕ ಆಟವಾಡುತ್ತಾ 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದು 43 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ. ತತ್ಕ್ಷಣ ಮಗುವನ್ನು ಕೊಳವೆ ಬಾವಿಯಿಂದ ಹೊರ ತೆಗೆಯಲು ಜೆಸಿಬಿ ಯಂತ್ರಗಳ ಸಹಾಯದಿಂದ ಪಕ್ಕದಲ್ಲೇ ಸುರಂಗ ಕೊರೆಯುವ ಕಾರ್ಯಾಚರಣೆ ಆರಂಭಗೊಂಡಿತ್ತು. ಆದರೆ ಸತತ ಕಾರ್ಯಾಚರಣೆ ನಡೆದರೂ ಬಾಲಕನನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ವಿದಿಶಾ ಜಿಲ್ಲಾಧಿಕಾರಿ ಉಮಾ ಶಂಕರ್ ಭಾರ್ಗವ ತಿಳಿಸಿರುವುದಾಗಿ ವರದಿಯಾಗಿದೆ.
ಆಕ್ಸಿಜನ್ ಪೈಪ್ನ್ನು ಕೊಳವೆ ಬಾವಿಗೆ ಇಳಿಸಿ ರಾತ್ರಿಯ ದೃಷ್ಟಿ ಸಾಧನದ ಮೂಲಕ ರಕ್ಷಣಾ ತಂಡ ಬಾಲಕನ ಪರಿಸ್ಥಿತಿ ಮೇಲೆ ನಿಗಾ ಇಟ್ಟಿದ್ದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬಂದಿ ಕಾರ್ಯಾಚರಣೆ ನಡೆಸಿದರೂ ಬಾಲಕ ಬದುಕಿ ಬರಲಿಲ್ಲ. ಬಾಲಕನ ಸಾವಿಗೆ ಸಂತಾಪ ಸೂಚಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬಾಲಕನ ಕುಟುಂಬಕ್ಕೆ 4 ಲಕ್ಷ ರೂಪಾಯಿ ನೆರವು ಘೋಷಿಸಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.