ಭೋಪಾಲ್, ಮಾ 15 (DaijiworldNews/DB): 7 ವರ್ಷದ ಬಾಲಕನೊಬ್ಬ ಆಟವಾಡುತ್ತಾ 60 ಅಡಿ ಆಳದ ಕೊಳವೆ ಬಾವಿಗೆ ಕಾಲು ಜಾರಿ ಬಿದ್ದ ಘಟನೆ ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿದೆ.
ಲೋಕೇಶ್ ಕೊಳವೆ ಬಾವಿಗೆ ಬಿದ್ದ ಬಾಲಕ. ಜಿಲ್ಲೆಯ ಲಾಟೇರಿ ತಹಸಿಲ್ ವ್ಯಾಪ್ತಿಯ ಖೇರ್ಖೇಡಿ ಪಥರ್ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಮಂಗಳವಾರ ಬೆಳಗ್ಗೆ 11 ಗಂಟೆಯ ವೇಳೆಗೆ ಮನೆಯ ಪಕ್ಕದಲ್ಲಿ ಬಾಲಕ ಆಟವಾಡುತ್ತಿದ್ದ. ಈ ವೇಳೆ ಕಾಲು ಜಾರಿ 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದಾನೆ.
ಕೊಳವೆ ಬಾವಿಯಲ್ಲಿ 43 ಅಡಿ ಆಳದಲ್ಲಿ ಬಾಲಕ ಸಿಲುಕಿಕೊಂಡಿದ್ದು, ಈ ವಿಚಾರ ತಿಳಿದ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಬಾಲಕನನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲು ಕಾರ್ಯಾಚರಣೆ ಆರಂಭಿಸಲಾಗಿದೆ. ಆತನಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಬೋರ್ವೆಲ್ನೊಳಗೆ ಕ್ಯಾಮರಾ ಇಳಿಸಿ ಆತನ ಪರಿಸ್ಥಿತಿ ಬಗ್ಗೆ ತಿಳಿಯಲಾಗುತ್ತಿದೆ. ಇನ್ನು ಆತನನ್ನು ಮೇಲಕ್ಕೆತ್ತುವ ಸಲುವಾಗಿ ಬೋರ್ವೆಲ್ ಪಕ್ಕದಲ್ಲಿ ಸುರಂಗ ಅಗೆಯಲಾಗುತ್ತಿದೆ ಎಂದು ವಿದಿಶಾ ಎಎಸ್ ಪಿ ಸಮೀರ್ ಯಾದವ್ ತಿಳಿಸಿದ್ದಾರೆ.
ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 5 ವರ್ಷದ ಬಾಲಕ ನಿನ್ನೆಯಷ್ಟೇ ಉಸಿರುಗಟ್ಟಿ ಸಾವನ್ನಪ್ಪಿದ್ದ. ಇದೀಗ ಆ ಘಟನೆಯ ಬೆನ್ನಲ್ಲೇ ಇನ್ನೊಬ್ಬ ಬಾಲಕ ಮಧ್ಯಪ್ರದೇಶದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದಾನೆ.