ನವದೆಹಲಿ, ಮಾ 14 (DaijiworldNews/DB): ಆಸ್ಕರ್ ಪ್ರಶಸ್ತಿ ವಿಜೇತ ತೆಲುಗಿನ ಆರ್ಆರ್ಆರ್ ಚಿತ್ರದ ನಾಟು ನಾಟು ಹಾಡು ಮತ್ತು ತಮಿಳಿನ ಸಾಕ್ಷ್ಯಚಿತ್ರ ' ದಿ ಎಲಿಫೆಂಟ್ ವಿಸ್ಪರರ್ಸ್ ಚಿತ್ರತಂಡವನ್ನು ಮಂಗಳವಾರ ರಾಜ್ಯಸಭೆಯಲ್ಲಿ ಸರ್ವಪಕ್ಷಗಳು ಅಭಿನಂದಿಸಿದವು.
ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಜಗದೀಪ್ ಧನ್ಕರ್ ಮಾತನಾಡಿ, ನಾಟು ನಾಟು ಹಾಡು ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರಗಳು ಆಸ್ಕರ್ ಪ್ರಶಸ್ತಿಗೆ ಭಾಜನರಾಗಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರ. ಭಾರತದ ಚಿತ್ರಗಳಿಗೆ ಮನ್ನಣೆಯನ್ನು ಇದು ಸೂಚಿಸುತ್ತದೆ ಎಂದರು.
ಇನ್ನು ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದಕ್ಷಿಣ ಭಾರತದ ಚಿತ್ರಗಳಿಗೆ ಸಿಕ್ಕಿರುವ ಪ್ರಶಸ್ತಿ ನಮಗೆಲ್ಲರಿಗೂ ಹೆಮ್ಮೆ ತಂದಿದೆ. ಆದರೆ ಈ ಗೆಲುವಿನ ಕ್ರೆಡಿಟ್ನ್ನು ಬಿಜೆಪಿಯವರು ಮೋದಿಗೆ ನೀಡದಿರಿ ಎಂದು ಚಟಾಕಿ ಹಾರಿಸಿದರು.
ಚಿತ್ರದ ನಿರ್ದೇಶನ ನಮ್ಮದು, ಹಾಡನ್ನು ನಾವೇ ಬರೆದಿದ್ದೇವೆ. ನರೇಂದ್ರ ಮೋದಿಯವರೇ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ ಎಂದೆಲ್ಲಾ ಕ್ರೆಡಿಟ್ ತೆಗೆದುಕೊಳ್ಳಲು ಹೋಗಬೇಡಿ. ಏಕೆಂದರೆ ಇದು ದೇಶದ ಕೊಡುಗೆ ಎಂದು ಕುಟುಕಿದರು.