ಕುರುಗೋಡು, ಮಾ 14 (DaijiworldNews/DB): ಕರ್ನಾಟಕದಲ್ಲಿ ಅಧಿಕಾರಕ್ಕೇರುವ ಹಗಲುಗನಸು ಕಾಣುತ್ತಿರುವ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಸಿಎಂ ಪಟ್ಟಕ್ಕಾಗಿ ಕಾಳಗ ನಡೆಸುತ್ತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮಾ ಲೇವಡಿ ಮಾಡಿದ್ದಾರೆ.
ಮಾಜಿ ಶಾಸಕ ಸುರೇಶ್ ಬಾಬು ನೇತೃತ್ವದಲ್ಲಿ ಕುರುಗೋಡು ಪಟ್ಟಣದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದ ಅವರು, ಸಿದ್ದು, ಡಿಕೆಶಿ ಅವರು ಸಿಎಂ ಸ್ಥಾನದಲ್ಲಿ ಕೂರಲು ಸೂಟು ಬೂಟು ಹೊಲಿಸಿ ಕನಸು ಕಾಣುತ್ತಿದ್ದಾರೆ. ಆದರೆ ಅವರ ನಡುವಿನ ಕಾಳಗದ ನಡುವೆ ಅವರ ಅಧಿಕಾರದ ಕನಸೂ ಬಿದ್ದು ಹೋಗಲಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ದೇಶ, ರಾಜ್ಯದಲ್ಲಿ ಹಲವಾರು ಅಭಿವೃದ್ದಿ ಕೆಲಸಗಳನ್ನು ಮಾಡಿದೆ. ಸರ್ಕಾರದ ಅಭಿವೃದ್ದಿಗೆ ದೇಶದ ಜನರೂ ಫುಲ್ ಮಾರ್ಕ್ಸ್ ನೀಡಿದ್ದಾರೆ. ಜನಪರ ಕೆಲಸ, ಜನಪರ ಯೋಚನೆ ಮಾಡುವ ನರೇಂದ್ರ ಮೋದಿಯವರು ಇಡೀ ಜಗತ್ತಿಗೇ ಮಾದರಿಯಾಗಿ ಹೊರ ಹೊಮ್ಮಿದ್ದಾರೆ ಎಂದವರು ತಿಳಿಸಿದರು.
ಭಾರತದ ಅತಿಕ್ರಮಣಕ್ಕೆ ಮುಂದಾದ ಚೀನಾವನ್ನು ಸಮರ್ಥವಾಗಿ ನಮ್ಮ ದೇಶ ಎದುರಿಸಿದೆ. ಅಂತಹ ಗುಂಡಿಗೆ ಪ್ರಧಾನಿ ನರೇಂದ್ರ ಮೋದಿಯವರು. ಚೀನಾದ ಹೆಡೆಮುರಿಕಟ್ಟಲು ಅವರು ಶಕ್ತರಾಗಿದ್ದಾರೆ. ದೇಶ ರಕ್ಷಣೆ, ದೇಶದ ಅಭಿವೃದ್ದಿ, ಆ ಮೂಲಕ ಸಮಾಜದ ಕಟ್ಟಕಡೆಯ ಜನರ ಅಭಿವೃದ್ದಿಗಾಗಿ ದೇಶದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದವರು ಹೇಳಿದರು.