ಮಂಡ್ಯ, ಮಾ 19(SM): ಲೋಕಸಭಾ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಈ ನಡುವೆ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮೊದಲ ದಿನ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಏಪ್ರಿಲ್ 18ರಂದು ಚುನಾವಣೆ ನಡೆಯುವ ಹಿನ್ನೆಲೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ಮೊದಲ ದಿನವಾದ ಮಂಗಳವಾರ ಪಕ್ಷೇತರ ಅಭ್ಯರ್ಥಿ ಕೌಡ್ಲೆ ಚನ್ನಪ್ಪ ನಾಮಪತ್ರ ಸಲ್ಲಿಸಿದರು. ಅಲ್ಲದೆ ಸಂಯುಕ್ತ ಜನತಾ ದಳ ಪಕ್ಷದಿಂದ ಒಬ್ಬರು, ಸಮಾಜವಾದಿ ಪಕ್ಷದಿಂದ ಒಬ್ಬರು ನಾಮಪತ್ರವನ್ನು ಸಲ್ಲಿಸಿದ್ದಾರೆ.
ಸುಮಲತಾ ಅಂಬರೀಷ್ ಆಹ್ವಾನ ಮಾಜಿ ಸಚಿವ ದಿ. ಅಂಬರೀಶ್ ಪತ್ನಿ ಸುಮಲತಾ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಸ್ಪರ್ಧೆಯ ಕಾರಣಕ್ಕೆ ಮಂಡ್ಯ ಕ್ಷೇತ್ರದ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ಈ ನಡುವೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಮಾ.20ರ ಬುಧವಾರದಂದು ನಾಮಪತ್ರವನ್ನು ಸಲ್ಲಿಸಲಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇನ್ನು ಸುಮಲತಾ ಸ್ಪರ್ಧೆ ಹಿನ್ನೆಲೆ ಬಿಜೆಪಿ ಅವರಿಗೆ ಬೆಂಬಲವನ್ನು ನೀಡಲು ನಿರ್ಧರಿಸಿದೆ ಎನ್ನಲಾಗಿದೆ.