ಹೈದರಾಬಾದ್, ಮಾ 14 (DaijiworldNews/DB): ಬೀದಿ ನಾಯಿಗಳ ದಾಳಿಯಿಂದ ಪದೇ ಪದೇ ಜೀವ ಹಾನಿ ಸಂಭವಿಸುತ್ತಿರುವ ಘಟನೆಗಳು ಇತ್ತೀಚೆಗೆ ನಡೆಯುತ್ತಿದೆ. ಇದೀಗ ಬೀದಿ ನಾಯಿಗಳ ದಾಳಿಗೆ ತೆಲಂಗಾಣದಲ್ಲಿ ಬಾಲಕನೊಬ್ಬ ಬಲಿಯಾಗಿದ್ದಾನೆ.
ರಘುನಾಥಪಾಲೆಂ ಮಂಡಲದ ಪುಟಾಣಿ ತಾಂಡಾದ ಬಾನೋತ್ ಭಾರತ್ (5) ಮೃತ ಬಾಲಕ. ತೆಲಂಗಣಾದ ಖಮ್ಮಂ ಜಿಲ್ಲೆಯಲ್ಲಿ ಒಂದು ತಿಂಗಳಿನಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಮನೆ ಬಳಿಯಿರುವ ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕ ಬಾನೋತ್ ಮೇಲೆ ಏಕಾಏಕಿ ಬೀದಿ ನಾಯಿಗಳು ದಾಳಿ ನಡೆಸಿವೆ. ಬೀದಿ ನಾಯಿಗಳ ಕಡಿತದಿಂದ ಗಂಭೀರ ಗಾಯಗೊಂಡ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲದೆ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಮೃತಪಟ್ಟಿದ್ದಾನೆ.
ಕಳೆದ ತಿಂಗಳು 4 ವರ್ಷದ ಬಾಲಕನೊಬ್ಬ ಬೀದಿ ನಾಯಿಗಳ ದಾಳಿಗೆ ಬಲಿಯಾಗಿದ್ದ. ಇನ್ನು ಬೀದಿನಾಯಿಗಳ ನಿಯಂತ್ರಣ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳು ಉನ್ನತ ಮಟ್ಟದ ಸಭೆ ನಡೆಸಿದ್ದು, ನಿಯಂತ್ರಣಕ್ಕೆ ಬೇಕಾದ ಕ್ರಮಗಳ ಸಿದ್ದತೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.