ಬೆಂಗಳೂರು, ಮಾ 14 (DaijiworldNews/DB): ತಡವಾಗಿ ಎದ್ದೇಳುವ ಹಾಗೂ ಕೆಲಸ ಮಾಡದೇ ದಿನಗಳೆಯುವ ಪತ್ನಿಯ ವರ್ತನೆಯಿಂದ ನೊಂದು ಪತಿಯೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಸಂಗ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಬಸವನಗುಡಿ ನಿವಾಸಿ ಕಮ್ರಾನ್ ಖಾನ್ (39) ಅವರೇ ಪತ್ನಿ ವಿರುದ್ದ ದೂರು ದಾಖಲಿಸಿದ ಪತಿ. ಪತ್ನಿ ಆಯೇಷಾ ಫರೀನ್, ಮಾವ ಆರೀಫ್ ಪಾಷಾ, ಅತ್ತೆ ಹೀನಾ ಕೌಸರ್ ಹಾಗು ಬಾಮೈದ ಮೊಹಮ್ಮದ್ ಮೋಯಿನ್ ವಿರುದ್ದ ಕಮ್ರಾನ್ ಖಾನ್ ದೂರು ದಾಖಲಿಸಿದ್ದಾರೆ. ಸದ್ಯ ನಾಲ್ವರ ವಿರುದ್ದ ಎಫ್ಐಆರ್ ದಾಖಲಾಗಿದ್ದು, ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2017ರಲ್ಲಿ ಖಾನ್ ಅವರು ಇಲಿಯಾಜ್ ನಗರದ ಆಯೇಷಾ ಫರೀನ್ ಅವರನ್ನು ವರಿಸಿದ್ದರು. ಮದುವೆಯಾದ ಬಳಿಕ ರಾತ್ರಿ ಮಲಗಿದರೆ ಮಧ್ಯಾಹ್ನ 12 ಗಂಟೆವರೆಗೂ ಪತ್ನಿ ಎದ್ದೇಳುತ್ತಿರಲಿಲ್ಲ. ಅನಾರೋಗ್ಯ ಕಾರಣ ನೀಡಿ ಮಲಗುತ್ತಿದ್ದರು. ಅಲ್ಲದೆ ಮಧ್ಯಾಹ್ನ ಎದ್ದ ಮೇಲೆ ಸಂಜೆವರೆಗೆ ಅನಗತ್ಯ ಕಾಲಹರಣ ಮಾಡಿ ಸಂಜೆ 5 ಗಂಟೆಗೆ ಮತ್ತೆ ಮಲಗುತ್ತಾಳೆ. ರಾತ್ರಿ 9.30ಕ್ಕೆ ಎದ್ದು ಊಟ ಮಾಡಿ ಮತ್ತೆ ಮಲಗುತ್ತಾಳೆ. ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇನ್ನು ಆಕೆಗೆ ಟೈಫಾಯಿಡ್, ಥೈರಾಯಿಡ್, ಕಣ್ಣು ಸಂಬಂಧಿ ಕಾಯಿಲೆಗಳಿದ್ದು, ಮದುವೆ ಮುಂಚೆ ಇದು ನನಗೆ ತಿಳಿದಿರಲಿಲ್ಲ. ನಾನು ಪ್ರತಿದಿನ ಕಚೇರಿಗೆ ಹೋಗುವಾಗ ನನ್ನ ತಾಯಿಯೇ ಅಡುಗೆ ಮಾಡುತ್ತಾರೆ. ಅಲ್ಲದೆ ಅನಾರೋಗ್ಯ ನೆಪ ಹೇಳಿ ಆಗಾಗ ತವರು ಮನೆಗೆ ಹೋಗುತ್ತಾಳೆ. ಆಸ್ಪತ್ರೆಗೆ ಕರೆದೊಯ್ಯುತ್ತೇನೆ ಎಂದರೆ ಆಕೆ ಒಪ್ಪುವುದಿಲ್ಲ. ನನ್ನ ಕುಟುಂಬದ ಬಗ್ಗೆ ನಿನಗೆ ಗೊತ್ತಿಲ್ಲ ಎಂದೆಲ್ಲಾ ಬೆದರಿಕೆ ಹಾಕುತ್ತಿದ್ದಾಳೆ ಎಂದು ಪತಿ ಖಾನ್ ಪತ್ನಿ ವಿರುದ್ದ ದೂರು ದಾಖಲಿಸಿದ್ದಾರೆ.
ಇನ್ನು ಅಕ್ಟೋಬರ್ 6ರಂದು ತವರು ಮನೆಗೆ ಹೋಗುತ್ತೇನೆಂದು ಆಕೆ ಹೇಳಿದಾಗ ಎರಡು ದಿನದಲ್ಲಿ ಹಬ್ಬ ಇದ್ದು, ಹಬ್ಬ ಕಳೆದ ಮೇಲೆ ಹೋಗು ಎಂದಿದ್ದಕ್ಕೆ ನನ್ನ ಮನೆಗೆ ಆ ದಿನ ರಾತ್ರಿ 25 ಮಂದಿಯನ್ನು ಕರೆಸಿ ನನ್ನ ಹಾಗೂ ಮನೆಯವರ ಮೇಲೆ ಹಲ್ಲೆ ನಡೆಸಿದ್ದಾಳೆ. ನಮ್ಮ ಮನೆಯ ಗೃಹಪಯೋಗಿ ವಸ್ತುಗಳೂ ನಾಶ ಮಾಡಿದ್ದಾರೆ. ಕೆಲಸ ಮಾಡುವಂತೆ ಹೇಳಿದರೆ ಆಕೆ ಕೂಗಾಡುತ್ತಾಳೆ. ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ ನನ್ನ ತಾಯಿಯೇ ಎಲ್ಲಾ ಕೆಲಸಗಳನ್ನು ಏಕಾಂಗಿಯಾಗಿ ಮಾಡಬೇಕಾಗಿದೆ. ನನ್ನ ಹಣ ಪಡೆದುಕೊಳ್ಳುವುದಕ್ಕಾಗಿಯೇ ಆಕೆಯ ಮನೆಯವರು ನನ್ನೊಂದಿಗೆ ಆಕೆಯನ್ನು ಮದುವೆ ಮಾಡಿಸಿದ್ದಾರೆ. ಆಕೆ ಹಾಗೂ ಆಕೆಯ ಮನೆಯವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.