ರಾಮನಗರ, ಮಾ 14 (DaijiworldNews/DB): ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಹಲವು ಕೈ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಇಂದಿನಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಟೋಲ್ ಸಂಗ್ರಹ ಆರಂಭವಾಗಿದ್ದು, ಇದಕ್ಕೆ ಕಾಂಗ್ರೆಸ್ ಸಹಿತ ಹಲವು ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಸಂಚರಿಸುವ ವಾಹನಗಳಿಗೆ ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಬಳಿ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ತೆರಳುವ ವಾಹನಗಳಿಗೆ ರಾಮನಗರ ತಾಲೂಕಿನ ಶೇಷಗಿರಿ ಹಳ್ಳಿ ಪ್ಲಾಜಾ ಬಳಿ ಟೋಲ್ ಸಂಗ್ರಹ ಆರಂಭಗೊಂಡಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಕಣಿಮಿಣಿಕೆ ಟೋಲ್ ಪ್ಲಾಜಾ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಇನ್ನು ರಾಮನಗರ ಬಳಿಯ ಶೇಷಗಿರಿಹಳ್ಳಿ ಪ್ಲಾಜಾ ಬಳಿಯೂ ಸಂಘಟನೆಗಳು ಹಾಗೂ ಕಾಂಗ್ರೆಸ್ ನಾಯಕರು ಪ್ರತಿಭಟಿಸಿದರು.
ಟೋಲ್ ಪ್ಲಾಜಾಗಳಲ್ಲಿ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಕೋರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ರಾಮನಗರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಮಾಡಿದ್ದಾರೆ. ಹೀಗಾಗಿ ಟೋಲ್ ಬಳಿ 3 ಕೆಎಸ್ಆರ್ಪಿ ತುಕಡಿ, ಸ್ಥಳೀಯ ಪೊಲೀಸರ ನಿಯೋಜನೆ ಮಾಡಲಾಗಿದೆ. ಭದ್ರತೆಗಾಗಿ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಎಸ್ಪಿ ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಕಾರು, ಜೀಪು, ವ್ಯಾನ್ಗಳಿಗೆ ಏಕಮುಖ ಸಂಚಾರಕ್ಕೆ 135 ರೂ. ಟೋಲ್ ದರ ನಿಗದಿ ಮಾಡಲಾಗಿದೆ. ಎರಡೂ ಕಡೆಗೆ 205 ರೂ. ನಿಗದಿ ಮಾಡಲಾಗಿದೆ. ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನ, ಮಿನಿ ಬಸ್ಗಳಿಗೆ ಏಕಮುಖ ಸಂಚಾರಕ್ಕೆ 220 ರೂ., ಅದೇ ದಿನ ಮರುಸಂಚಾರಕ್ಕೆ 330 ರೂಪಾಯಿ ಟೋಲ್ ದರ ವಿಧಿಸಲಾಗಿದೆ. ಬಸ್/ಟ್ರಕ್ಗಳಿಗೆ ಏಕಮುಖ ಸಂಚಾರಕ್ಕೆ 460 ರೂ, ಎರಡೂ ಕಡೆಗೆ 690 ರೂ. ಟೋಲ್ ದರ ನಿಗದಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದ್ದಾರೆ.