ಬೆಂಗಳೂರು, ಮಾ 13 (DaijiwordNews/HR): ನಿಮ್ಹಾನ್ಸ್ ಸೇರಬೇಕಾದ ಗಿರಾಕಿಗಳು ಹೇಳಿದ್ದಕ್ಕೆಲ್ಲ ನಾನು ಪ್ರತಿಕ್ರಿಯಿಸುವುದಿಲ್ಲ. ಅವರನ್ನು ಆಸ್ಪತ್ರೆಗೆ ಸೇರಿಸುವುದು ಉತ್ತಮ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷ ಹಿನಾಯ ಪರಿಸ್ಥಿತಿಯಲ್ಲಿದ್ದು, ಬಿಜೆಪಿ ಸಚಿವರಿಗೆ ಸಿಡಿ ತೋರಿಸಿ ಪಕ್ಷಕ್ಕೆ ಕರೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಡಿಕೆಶಿ, ಬಿಜೆಪಿ ಪಕ್ಷದಲ್ಲಿ ಆಂತರಿಕವಾಗಿ ಏನೇನಾಗುತ್ತಿದೆಯೋ ಅದನ್ನು ಮೊದಲು ನೋಡಿಕೊಳ್ಳಲಿ. ನಿಮ್ಹಾನ್ಸ್ ಸೇರಬೇಕಾದ ಗಿರಾಕಿಗಳು ಹೇಳಿದ್ದಕ್ಕೆಲ್ಲ ನಾನು ಪ್ರತಿಕ್ರಿಯಿಸುವುದಿಲ್ಲ. ಅವರನ್ನು ಆಸ್ಪತ್ರೆಗೆ ಸೇರಿಸುವುದು ಉತ್ತಮ ಎಂದರು.
ಇನ್ನು ಡಿ.ಕೆ. ಶಿವಕುಮಾರ್ ಅವರ ಕೈಗೆ ರಾಜ್ಯ ಸಿಕ್ಕರೆ ಡಿ.ಕೆ. ಶಿವಕುಮಾರ್ ಟೋಲ್ ಎಂಬ ಮತ್ತೊಂದು ಟೋಲ್ ಹಾಕುತ್ತಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಟೋಲ್ ವಿಚಾರವಾಗಿ ಮಾತನಾಡುವುದೇ ಆದರೆ, ಸದ್ಯಕ್ಕೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟೋಲ್ ವಿಚಾರವಾಗಿ ಮಾತನಾಡೋಣ. ಮಿಕ್ಕ ವಿಚಾರವನ್ನು ನಂತರ ಮಾತನಾಡೋಣ ಎಂದು ಹೇಳಿದ್ದಾರೆ.