ಪಾಟ್ನಾ, ಮಾ 11 (DaijiworldNews/DB): ಜಾರಿ ನಿರ್ದೇಶನಾಲಯವು ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದೆ. ಆದರೆ ಯಾವುದೇ ರೀತಿಯ ಕಿರುಕುಳ ನೀಡಿದರೂ ನಾನು ನಿಮ್ಮ ಮುಂದೆ ತಲೆ ಬಾಗಲಾರೆ ಎಂದು ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.
ಈ ಸಂಬಂಧ ಶನಿವಾರ ಟ್ವೀಟ್ ಮಾಡಿರುವ ಅವರು, ಉದ್ಯೋಗಕ್ಕಾಗಿ ಭೂಮಿ ಪಡೆದಿರುವ ಆಧಾರರಹಿತ ಆರೋಪದಲ್ಲಿ ಇಡಿಯು ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದೆ. ಗರ್ಭಿಣಿ ಸೊಸೆ, ಮೊಮ್ಮಕ್ಕಳು, ಪುತ್ರಿಯರನ್ನು ತನಿಖೆ ನೆಪದಲ್ಲಿ 15 ಗಂಟೆ ಕಾಲ ಕೇಂದ್ರ ಸರ್ಕಾರ ಇಡಿ ಮುಂದೆ ಕುಳಿತುಕೊಳ್ಳುವಂತೆ ಮಾಡಿದೆ ಎಂದು ಆಪಾದಿಸಿದರು.
ತುರ್ತು ಪರಿಸ್ಥಿತಿಯಲ್ಲಿನ ಕೆಟ್ಟ ದಿನಗಳ ವಿರುದ್ದ ಹೋರಾಡಿದ ಅನುಭವ ನನಗಿದೆ. ಆದರೆ ಬಿಜೆಪಿಯು ನಮ್ಮೊಂದಿಗೆ ರಾಜಕೀಯ ಹೋರಾಟ ನಡೆಸಲು ಕೀಳು ಮಟ್ಟಕ್ಕೆ ಇಳಿದಿರುವುದು ದುರದೃಷ್ಟಕರ ಎಂದವರು ಹರಿ ಹಾಯ್ದರು.
ನಾನಾಗಲೀ, ನನ್ನ ಕುಟುಂಬವಾಗಲಿ ಎಂದಿಗೂ ನಿಮ್ಮ ಮುಂದೆ ತಲೆ ಬಾಗುವುದಿಲ್ಲ ಎಂದು ಇದೇ ವೇಳೆ ಸವಾಲು ಹಾಕಿದ್ದಾರೆ.
ಉದ್ಯೋಗಕ್ಕಾಗಿ ಭೂಮಿ ಹಗರಣ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಲಾಲೂ ಪುತ್ರ ತೇಜಸ್ವಿ ಯಾದವ್ ಅವರ ದೆಹಲಿ ನಿವಾಸದ ಮೇಲೆ ದಾಳಿ ನಡೆಸಿತ್ತು. ಇದಕ್ಕೂ ಮುನ್ನ ಲಾಲೂ ಪತ್ನಿ ರಾಬ್ರಿ ದೇವಿ ಮತ್ತು ಕುಟುಂಬದ ಇತರರ ವಿರುದ್ದ ಸಿಬಿಐ ದಾಳಿಯಾಗಿತ್ತು.