ರಾಯಚೂರು, ಮಾ 10 (DaijiworldNews/DB): ಊರಿನಲ್ಲಿರುವ ಮಕ್ಕಳೆಲ್ಲಾ ನನ್ನದೇ ಎಂಬ ಪರಿಸ್ಥಿತಿ ಕಾಂಗ್ರೆಸ್ನಲ್ಲಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ ಅವರು ಹಣ ಬಿಡುಗಡೆ ಮಾಡಿದ್ದೇ ಆದಲ್ಲಿ ಹಣ ಬಿಡುಗಡೆ, ಟೆಂಡರ್, ಮಂಜೂರಾತಿಗಳ ದಾಖಲೆಯನ್ನು ನೀಡಲಿ ಎಂದು ಸವಾಲು ಹಾಕಿದರು.
ಚಂದ್ರ ಲೋಕದಲ್ಲಿ ಸೈಟ್ ನೀಡಲೂ ಡಿಪಿಆರ್ ಆಗಿದೆ ಎನ್ನುವ ಜಾಯಮಾನ ಅವರದು. ಮೂಗಿಗೆ ತುಪ್ಪ ಹಚ್ಚುವುದೇ ಅವರ ಕೆಲಸ. ಬಿಜೆಪಿ ಮಾಡಿದ ಕೆಲಸಗಳಿಗೆ ಸೀಲ್ ಹಾಕಲು ಅವರು ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಮುಖ್ಯಮಂತ್ರಿಗಳಿಗೆ ಮಾಹಿತಿ ಇರುವ ಬಗ್ಗೆಯೂ ನನಗೆ ತಿಳಿದಿಲ್ಲ ಎಂದ ಅವರು, ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಯಾರು ಯಾವ ಪಕ್ಷವನ್ನಾದರೂ ಸೇರಬಹುದು, ಯಾರಿಗೂ ಮತ ನೀಡಬಹುದು ಎಂದರು.
ಕಾಂಗ್ರೆಸ್ನವರು ಮೊದಲು ತಮ್ಮ ಪಕ್ಷದೊಳಗಿನ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದಕ್ಕೆ ಮುಂದಾಗಲಿ. ನಮ್ಮ ಪಕ್ಷದಲ್ಲಿ ಟಿಕೆಟ್ ನೀಡುವ ಕುರಿತು ಅವರಿಗೆ ಚಿಂತೆ ಬೇಡ. ಅವರ ಪಕ್ಷದಲ್ಲಿ ಟಿಕೆಟ್ ಘೋಷಣೆಯಾದ ಕೂಡಲೇ ಆಂತರಿಕ ಸ್ಪೋಟ ಭುಗಿದೇಳುವುದು ನಿಶ್ಚಿತ. ಡಿಕೆಶಿ, ಸಿದ್ದರಾಮಯ್ಯ, ಖರ್ಗೆ ಬೆಂಬಲಿಗರಲ್ಲಿ ಕಾದಾಟ ಆರಂಭವಾಗಲಿದೆ ಎಂದು ಸಿ.ಟಿ. ರವಿ ಹೇಳಿದರು.