ಗೋವಾ, ಮಾ 18(SM): ತೀವ್ರ ಅನಾರೋಗ್ಯದಿಂದಾಗಿ ಮಾರ್ಚ್ 17ರ ರವಿವಾರದಂದು ಮೃತಪಟ್ಟ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಡೆಸಲಾಗಿದೆ. ಇದರ ಬೆನ್ನಲ್ಲೆ ಗೋವಾ ರಾಜ್ಯಕ್ಕೆ ನೂತನ ಸಿಎಂ ಆಯ್ಕೆ ಪ್ರಕ್ರಿಯೆ ನಡೆದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಸೋಮವಾರ ಸಂಜೆ ನಡೆದ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಗೋವಾದ ಸ್ಪೀಕರ್ ಪ್ರಮೋದ್ ಸಾವಂತ್ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
ಗೋವಾಕ್ಕೆ ತೆರಳಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಿಜೆಪಿ ಮತ್ತು ಮೈತ್ರಿ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಬಿಜೆಪಿಯ ಪ್ರಮೋದ್ ಸಾವಂತ್ ಅವರನ್ನೇ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಪ್ರಮುಖ ವಿಚಾರವೆಂದರೆ, ಸಾವಂತ್ ಗೆ ಆರ್ ಎಸ್ ಎಸ್ ಬೆಂಬಲವಿದೆ. ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ಭೇಟಿಯಾದ ಬಳಿ ಈ ಬೆಳವಣಿಗೆಗಳು ನಡೆದಿವೆ. ಸಾವಂತ್ ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿದ್ದಾರೆ.
ಗೋವಾ ವಿಧಾನಸಭೆ ಶಾಸಕರ ಬಲಾಬಲ :
ಹಾಲಿ ಬಲಾಬಲ-37, ಮ್ಯಾಜಿಕ್ ನಂಬರ್-19, ಬಿಜೆಪಿ : 12, ಗೋವಾ ಫಾರ್ವಡ್: 3, ಎಂಜಿಪಿ: 3, ಎನ್ ಸಿಪಿ : 1, ಪಕ್ಷೇತರರು : 2, ಬಿಜೆಪಿ ಪ್ಲಸ್ : 21, ಕಾಂಗ್ರೆಸ್ : 14 ಸಂಖ್ಯಾಬಲವನ್ನು ಹೊಂದಿದೆ. ಇನ್ನು 17 ಶಾಸಕರ ಬಲದೊಂದಿಗೆ ಅತಿದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದರೂ, ಮಹಾರಾಷ್ಟ್ರ ಗೋಮಾಂತಕ್ ಪಾರ್ಟಿ, ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಮೂವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಿ, ಆಡಳಿತ ನಡೆಸುತ್ತಿದೆ.
ಫೆಬ್ರವರಿ 2017ರ ನಂತರ ಕಾಂಗ್ರೆಸ್ಸಿನಿಂದ ಮೂವರು ಶಾಸಕರು, ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದು ಕಾಂಗ್ರೆಸ್ ಗೆ ಮತ್ತೊಂದು ಹಿನ್ನಡೆಯಾಗಿದೆ.