ಮೈಸೂರು/ ಮಂಡ್ಯ, ಮಾ 09 (DaijiworldNews/DB): ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ನಾಳೆಯೇ (ಮಾರ್ಚ್ 10) ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಹೊಸ ಬಾಂಬ್ ಸಿಡಿಸಿದ್ದಾರೆ.
ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆಂಬ ಸುದ್ದಿಗಳು ಕಳೆದ ಹಲವು ದಿನಗಳಿಂದ ಹರಿದಾಡುತ್ತಿದ್ದು, ಈ ನಡುವೆ ನಾಳೆ ಅವರು ಸುದ್ದಿಗೋಷ್ಠಿಯನ್ನೂ ಕರೆದಿದ್ದಾರೆ. ಸುಮಲತಾ ಸುದ್ದಿಗೋಷ್ಠಿಯಲ್ಲಿ ತಮ್ಮ ಮುಂದಿನ ರಾಜಕೀಯ ನಡೆಯನ್ನು ಹೇಳಲಿದ್ದಾರೆ ಎಂಬುದಾಗಿಯೂ ಕುತೂಹಲ ಹೆಚ್ಚಾಗಿದೆ. ಈ ನಡುವೆ ಅವರು ನಾಳೆಯೇ ಬಿಜೆಪಿ ಸೇರಲಿದ್ದಾರೆ ಎಂಬ ಜೆಡಿಎಸ್ ಶಾಸಕ ಸಿ.ಎಸ್. ಪುಟ್ಟರಾಜು ಅವರ ಹೇಳಿಕೆ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಪುಟ್ಟರಾಜು, ಮಾರ್ಚ್ 12ರಂದು ಪ್ರಧಾನಿಯವರ ಮಂಡ್ಯದ ಕಾರ್ಯಕ್ರಮದಂದೇ ಸುಮಲತಾ ಬಿಜೆಪಿ ಸೇರ್ಪಡೆಗೆ ಯೋಜನೆ ರೂಪಿಸಲಾಗಿತ್ತು. ಆದರೆ ಅದು ಸರ್ಕಾರಿ ಕಾರ್ಯಕ್ರಮವಾದ್ದರಿಂದ ಅಂದು ಸೇರ್ಪಡೆಗೆ ಅವಕಾಶ ಸಿಗಲಿಲ್ಲ. ಹೀಗಾಗಿ ಅವು ನಾಳೆ ಬಿಜೆಪಿಯನ್ನು ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎಂದಿದ್ದಾರೆ.
ಇನ್ನು ಸುಮಲತಾ ಬಿಜೆಪಿ ಸೇರ್ಪಡೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರು ಸುದ್ದಿಗೋಷ್ಠಿ ಕರೆದಿದ್ದಾರೆ ಎನ್ನಲಾಗುತ್ತಿದೆ. ತಮ್ಮ ನಿವಾಸದಲ್ಲೇ ಅವರು ಬಿಜೆಪಿ ಸೇರ್ಪಡೆಯನ್ನು ಘೋಷಿಸಲಿದ್ದಾರೆ ಎಂದೂ ತಿಳಿದು ಬಂದಿದೆ.
ಇದಕ್ಕೂ ಮೊದಲು ಅವರು ತಮ್ಮ ಆಪ್ತರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದರು. ಬಿಜೆಪಿ ನಾಯಕರೊಂದಿಗೂ ಕೆಲವು ಮಾತುಕತೆಗಳು ನಡೆದಿತ್ತು. ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ನಾಯಕರ ಭಾವಚಿತ್ರವಿದ್ದ ಫ್ಲೆಕ್ಸ್ನಲ್ಲಿ ಸುಮಲತಾ ಫೋಟೋವೂ ಕಾಣಿಸಿಕೊಂಡಿತ್ತು. ಅಲ್ಲದೆ ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಅವರನ್ನೂ ಕಳೆದ ಕೆಲ ದಿನಗಳ ಹಿಂದೆ ಸುಮಲತಾ ಭೇಟಿಯಾಗಿದ್ದರು. ಆದರೆ ಈ ಭೇಟಿಯಲ್ಲಿ ಯಾವುದೇ ರಾಜಕೀಯ ಮಾತನಾಡಿಲ್ಲ ಎಂದೂ ಸುಮಲತಾ ಸ್ಪಷ್ಟನೆ ನೀಡಿದ್ದರು.
ಇನ್ನು ಬಿಜೆಪಿ ಸೇರಿದರೆ ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಬೇಕು, 2024ಕ್ಕೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ತನಗೆ ಟಿಕೆಟ್ ನೀಡಬೇಕು ಸೇರಿದಂತೆ ಕೆಲವು ಷರತ್ತುಗಳನ್ನೂ ವಿಧಿಸಿದ್ದಾರೆ ಎನ್ನಲಾಗಿದೆ.