ಚೆನ್ನೈ, ಮಾ 09 (DaijiworldNews/DB): ತಮಿಳುನಾಡು ಬಿಜೆಪಿಯಲ್ಲಿ ಪಕ್ಷಾಂತರ ಪರ್ವ ಮುಂದುವರಿದಿದ್ದು, ಐಟಿ ವಿಭಾಗದ ಪದಾಧಿಕಾರಿಗಳು ಸಹಿತ 13 ಮಂದಿ ಬಿಜೆಪಿ ತೊರೆದಿದ್ದಾರೆ.
ಪಕ್ಷದ ಚೆನ್ನೈ ಪಶ್ಚಿಮ ಘಟಕದ ಐಟಿ ವಿಭಾಗದ ಮುಖ್ಯಸ್ಥ ಓರತಿ ಅನ್ಬರಸು ಅವರೂ ಪಕ್ಷಕ್ಕೆ ಗುಡ್ಬೈ ಹೇಳಿದ್ದಾರೆ. ಅವರೊಂದಿಗೆ ಇತರ 12 ಮಂದಿ ಪದಾಧಿಕಾರಿಗಳು ಬಿಜೆಪಿ ತೊರೆದಿದ್ದಾರೆ. ಇನ್ನು ಆಡಳಿತ ಪಕ್ಷವಾದ ಡಿಎಂಕೆಗೆ ಸೇರ್ಪಡೆಯಾಗುವುದಿಲ್ಲ ಎಂಬುದಾಗಿ ಎಲ್ಲರೂ ಸ್ಪಷ್ಟಪಡಿಸಿದ್ದಾರೆ. ಐಟಿ ವಿಭಾಗದ ಮಾಜಿ ಮುಖ್ಯಸ್ಥರಾಗಿದ್ದ ಸಿಟಿಆರ್ ನಿರ್ಮಲ್ಕುಮಾರ್ ಅವರ ಹಾದಿ ಹಿಡಿಯುವುದಾಗಿ ಇವರೆಲ್ಲರೂ ಹೇಳಿಕೊಂಡಿದ್ದು, ಬಹುತೇಕ ಎಐಎಡಿಎಂಕೆ ಸೇರ್ಪಡೆಯಾಗುವುದು ನಿಚ್ಚಳವಾಗಿದೆ. ನಿರ್ಮಲ್ಕುಮಾರ್ ಅವರು ಪ್ರಸ್ತುತ ಎಐಎಡಿಎಂಕೆಯಲ್ಲಿದ್ದಾರೆ.
ಬಿಜೆಪಿಯಲ್ಲಿ ಕಳೆದ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದೆ. ಆದರೆ ಅಲ್ಲಿಯ ಪಿತೂರಿಗಳಿಗೆ ನಾವು ಬಲಿಯಾಗುವುದು ನಿಶ್ಚಿತ. ಹೀಗಾಗಿ ಪಕ್ಷ ತೊರೆಯುತ್ತಿದ್ದೇನೆ ಎಂದು ಅನ್ಬರಸು ಹೇಳಿದ್ದಾರೆ.
ಇನ್ನು ಬಿಜೆಪಿಯ ಪದಾಧಿಕಾರಿಗಳು ಪಕ್ಷ ತೊರೆಯುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಅಣ್ಣಾಮಲೈ, ನಾನು ಹೆಸರಿನ ಮುಂದೆ ಎಂಪಿ, ಎಂಎಲ್ಎ ಟ್ಯಾಗ್ ಹಾಕಿಕೊಳ್ಳಲು ಬಂದಿಲ್ಲ. ಬಿಜೆಪಿ ಸಮರ್ಥ ಪಕ್ಷ ಎಂಬ ಕಾರಣಕ್ಕಾಗಿ ಸೇರಿದ್ದೇನೆ. ಕೆಳ ಹಂತದ ಕೆಲವು ನಾಯಕರು ಪಕ್ಷ ತೊರೆದಿರಬಹುದು. ಆದರೆ ಮುಂದೆ ದೊಡ್ಡ ನಾಯಕರು ಬರುವ ಸಾಧ್ಯತೆಗಳೂ ಇಲ್ಲದಿಲ್ಲ ಎಂದಿದ್ದಾರೆ.