ಹುಬ್ಬಳ್ಳಿ, ಮಾ 17(SM): ವರದಕ್ಷಿಣೆ ಪಡೆದರೆ ಕಠಿಣ ಸಜೆಯಾಗುವುದು ನಮ್ಮಲ್ಲಿ ಚಾಲ್ತಿಯಲ್ಲಿದೆ. ಆದರೆ, ವರದಕ್ಷಿಣೆಗಾಗಿ ಪೀಡಿಸುವವರು ಅಲ್ಲೊಬ್ಬ ಇಲ್ಲೊಬ್ಬರು ಇದ್ದೇ ಇರುತ್ತಾರೆ. ಇಂತಹ ಪ್ರಕರಣವೊಂದು ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ತಾನು ಮದುವೆಯಾಗಿ ಸುಖ ಸಂಸಾರ ನಡೆಸುತ್ತೇನೆಂದು ನಂಬಿಸಿದ ಪತಿ ಪತ್ನಿಗೆ ವರದಕ್ಷಿಣೆಗಾಗಿ ಪೀಡಿಸಿದ್ದು, ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ಆರೋಪಿ ಪತಿ ಪರಾರಿಯಾಗಿದ್ದಾನೆ.
ವರದಕ್ಷಿಣೆ ತರಲು ತಡಮಾಡಿದ್ದಾಳೆಂಬ ಕಾರಣಕ್ಕೆ ಪಾಪಿ ಪತಿ ತವರಿಗೆ ಬಂದು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬಳಿಕ ಆರೋಪಿ ಪತಿ ಪರಾರಿಯಾಗಿದ್ದಾನೆ. ಹಳೆಹುಬ್ಬಳ್ಳಿಯ ಆನಂದನಗರದ ಯುವತಿವೋರ್ವಳನ್ನು ಐದು ವರ್ಷಗಳ ಹಿಂದೆ ಷರೀಫ್ ಎಂಬುವವರು ಮದುವೆಮಾಡಿಕೊಂಡಿದ್ದರು. ಆದರೆ, ಪತಿ ಹಾಗೂ ಆತನ ಮನೆಯವರು ವರದಕ್ಷಿಣೆಗಾಗಿ ಪ್ರತಿನಿತ್ಯವೂ ಪೀಡಿಸುತ್ತಿದ್ದರು.
ಕಳೆದ ಎರಡು ದಿನಗಳ ಹಿಂದೆ ವರದಕ್ಷಿಣೆ ತರುವಂತೆ ಪತ್ನಿಯನ್ನು ಆತ ತವರು ಮನೆಗೆ ಕಳುಹಿಸಿದ್ದ. ಆದರೆ ತವರಿಗೆ ಬಂದ ಪತ್ನಿ ವರದಕ್ಷಿಣೆ ತರಲು ತಡ ಮಾಡಿದ್ದಾಳೆ ಎಂಬುವುದು ಆತನ ಆರೋಪವಾಗಿತ್ತು. ಈ ಹಿನ್ನೆಲೆ ತವರು ಮನೆಗೆ ತೆರಳಿದ ಪತಿ, ಹೆಂಡತಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಗಾಯಾಳು ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಾಗಿದೆ.