ಬೆಂಗಳೂರು, ಮಾ 15(SM): ಲೋಕಸಭೆ ಚುನಾವಣೆ ಹಿನ್ನೆಲೆ ರಾಷ್ಟ್ರೀಯ ಪಕ್ಷಗಳು ಭರದ ಸಿದ್ಧತೆಗಳನ್ನು ನಡೆಸುತ್ತಿದೆ. ಕ್ಷೇತ್ರವಾರು ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕಾರ್ಯದಲ್ಲಿ ಪಕ್ಷಗಳು ನಿರತವಾಗಿವೆ. ಈ ನಡುವೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸುವ ಬಗ್ಗೆ ಮಾತುಗಳು ಕೇಳಿ ಬರಲಾರಂಭಿಸಿವೆ. ಇದಕ್ಕೆ ಪುಷ್ಠಿ ಎಂಬಂತೆ ಮಾಜಿ ಸಿಎಂ ಸಿದ್ದರಾಮಯ್ಯ ರಾಹುಲ್ ಪರ ಬ್ಯಾಟ್ ಬೀಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸಬೇಕು ಎಂಬುದು ನಮ್ಮ ಇಚ್ಛೆ ಎಂದು ಹೇಳಿಕೊಂಡಿದ್ದಾರೆ. ಕರ್ನಾಟಕದ ನಾಯಕರು ರಾಷ್ಟ್ರ ಕಾಂಗ್ರೆಸ್ ನಾಯಕರನ್ನು ಬೆಂಬಲಿಸುತ್ತಾ ಹಾಗೂ ಪ್ರೇರೇಪಿಸುತ್ತಾ ಬಂದಿದ್ದಾರೆ. ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ವಿಚಾರದಲ್ಲೂ ರಾಜ್ಯ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಿದ್ದು, ರಾಜ್ಯ ನಾಯಕರ ಸಹಕಾರ ಸಾಬೀತಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ನ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿರುವ ರಾಹುಲ್ ಗಾಂಧಿಯವರು ಕರ್ನಾಟಕದಿಂದ ಸ್ಪರ್ಧಿಸಲು ಸಿದ್ದರಾಮಯ್ಯ ಸೇರಿದಂತೆ ರಾಜ್ಯ ನಾಯಕರು ಬಯಸಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಅಭಿವೃದ್ಧಿಯ ಹೊಸತೊಂದು ಶಕೆ ಆರಂಭಗೊಳ್ಳಲಿದೆ ಎಂಬುವುದಾಗಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.