ಲಕ್ನೋ, ಫೆ 16 (DaijiworldNews/DB): ಚಳಿಯಿಂದಾಗಿ ಉತ್ತರ ಪ್ರದೇಶದಲ್ಲಿ ಕಳೆದೈದು ದಿನಗಳ ಅವಧಿಯಲ್ಲಿ ನಾಲ್ಕು ಶಿಶುಗಳು ಸಾವನ್ನಪ್ಪಿವೆ. ಘಟನೆ ಹಿನ್ನೆಲೆಯಲ್ಲಿ ಸರ್ಕಾರಿ ಮಕ್ಕಳ ಮನೆಯ ಅಧೀಕ್ಷಕರನ್ನು ಅಮಾನತು ಮಾಡಲಾಗಿದೆ.
ಪ್ರಗ್ ನಾರಾಯಣ ರಸ್ತೆಯಲ್ಲಿರುವ ಮಕ್ಕಳ ಆರೈಕೆ ಕೇಂದ್ರದಲ್ಲಿ ದಾಖಲಾಗಿದ್ದ ನಾಲ್ಕು ಶಿಶುಗಳು ಫೆಬ್ರವರಿ 10ರಿಂದ 14ರ ನಡುವೆ ಚಳಿ ಮತ್ತು ಶೀತದಿಂದಾಗಿ ಸಾವನ್ನಪ್ಪಿವೆ. ಇವೆಲ್ಲವೂ 1.5 ತಿಂಗಳಿಂದ 5 ತಿಂಗಳೊಳಗಿನ ಶಿಶುಗಳಾಗಿವೆ. ಘಟನೆ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಅಲ್ಲದೆ ಅಧೀಕ್ಷಕರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪರೀಕ್ಷಾಧಿಕಾರಿ ವಿಕಾಶ್ ಸಿಂಗ್ ಗುರುವಾರ ತಿಳಿಸಿದ್ದಾರೆ.
ಇನ್ನು ಶಿಶುಗಳು ಚಳಿಯಿಂದಾಗಿ ಸಾವನ್ನಪ್ಪಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಬೇಬಿ ರಾಣಿ ಮೌರ್ಯ ಹೇಳಿದ್ದಾರೆ. ಶಿಶುಗಳು ಕಡಿಮೆ ತೂಕ, ಜ್ವರ, ಥಲಸ್ಸೆಮಿಯಾದಿಂದ ಬಳಲುತ್ತಿದ್ದರು. ಇದಕ್ಕಾಗಿ ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು ಎಂದವರು ತಿಳಿಸಿದ್ದಾರೆ.