ಮುಂಬೈ,ಮಾ.14(AZM):ಮುಂಬೈಯ ರೈಲ್ವೆ ನಿಲ್ದಾಣದ ಪಾದಚಾರಿ ಸೇತುವೆ ಗುರುವಾರ ರಾತ್ರಿ ಕುಸಿದು ಬಿದ್ದ ಪರಿಣಾಮ ನಾಲ್ವರು ಮೃತಪಟ್ಟು,34 ಜನರು ಗಾಯಗೊಂಡಿದ್ದು,ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತಿದೆ.
ಛತ್ರಪತಿ ಶಿವಾಜಿ ಟೆರ್ಮಿನಸ್ ರೈಲ್ವೆ ನಿಲ್ದಾಣದ ಹೊರಭಾಗದ ಈ ಪಾದಚಾರಿ ಸೇತುವೆ,ಆಜಾದ್ ಮೈದಾನ್ ಪೊಲೀಸ್ ಠಾಣೆ ಹಾಗೂ ಟೈಮ್ಸ್ ಆಫ್ ಇಂಡಿಯಾ ಕಟ್ಟಡವನ್ನು ರೈಲ್ವೆ ನಿಲ್ದಾಣದೊಂದಿಗೆ ಸಂಪರ್ಕ ಕಲ್ಪಿಸುತ್ತಿತ್ತು. ಗುರುವಾರ ರಾತ್ರಿ ಈ ಸೇತುವೆ ಏಕಾಏಕಿ ಕುಸಿದು ಬಿದ್ದಿದೆ. ಗಾಯಗೊಂಡವರನ್ನು ಸಮೀಪದ ಖಾಸಗೀ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.
ಸೇತುವೆ ಕುಸಿತದಿಂದಾಗಿ ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಬದಲಿ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಪಾದಚಾರಿ ಸೇತುವೆಯ ಬೀಮ್ಗಳು ಹಾಗೆ ಇದ್ದು ಕಾಂಕ್ರೀಟ್ ಭಾಗಗಳು ಮಾತ್ರ ಕುಸಿದು ರಸ್ತೆಗೆ ಬಿದ್ದಿವೆ. ಅವಶೇಷಗಳಡಿ 15ಕ್ಕೂ ಅಧಿಕ ಜನರು ಸಿಲುಕಿಹಾಕಿಕೊಂಡಿರುವ ಸಾಧ್ಯತೆ ಇದೆ.