ಹಾಸನ,ಮಾ 13(MSP): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕು, ಹಾಗೆಂದು ಮಸೀದಿ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ ಆದರೆ ಮಸೀದಿ ಸ್ವಲ್ಪ ದೂರ ಇದ್ದರೆ ಒಳ್ಳೆಯದು ಹತ್ತಿರವಿದ್ದರೆ ಘರ್ಷಣೆ ಎಡೆ ಮಾಡಿಕೊಡಬಹುದು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹಾಸನದಲ್ಲಿ ಹೇಳಿದ್ದಾರೆ.
ಹಾಸನದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದರು. ಹಿಂದೂ ಮುಸ್ಲಿಂ ಎಂಬ ತಾರತಮ್ಯ ಬೇಡ. ಅಯೋಧ್ಯೆಯ ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ನಿವೇಶನ ವಿವಾದ ಬಗೆಹರಿಸಲು ಸುಪ್ರೀಂ ಕೋರ್ಟ್ ರಚಿಸಿರುವ ಮಧ್ಯಸ್ಥಿಕೆ ಸಮಿತಿಗೆ ಎರಡು ತಿಂಗಳ ಸಮಯವಕಾಶ ನೀಡಲಾಗಿದೆ. ಸಮಿತಿಯಲ್ಲಿ ಅಧ್ಯಾತ್ಮ ಗುರು ಶ್ರೀ ರವಿಶಂಕರ್ ಇರುವುದಕ್ಕೆ ನನ್ನ ಬೆಂಬಲ ಇದೆ. ಮುಸ್ಲಿಮರಿಗೂ ಅದೇ ಜಾಗದಲ್ಲಿ ಮಸೀದಿ ನಿರ್ಮಿಸಬೇಕು ಎಂದೇನಿಲ್ಲ. ಅಯೋಧ್ಯೆಯಿಂದ ಕೊಂಚ ದೂರದಲ್ಲಿ ಇದ್ದರೆ ಒಳ್ಳೆಯದು. ಮಸೀದಿಯೂ ಇರಲಿ, ಮಂದಿರವೂ ಇರಲಿ. ಎಲ್ಲರಿಗೂ ಒಪ್ಪಿಗೆ ಆಗುವಂತೆ ಸಂಧಾನ ಆಗಬೇಕು. ಆದರೆ ನನಗನಿಸುತ್ತದೆ ಈ ಸಂಧಾನದಿಂದ ಅಯೋಧ್ಯೆ ಸಮಸ್ಯೆ ಬಗೆಹರಿಯುವುದಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.