ಉತ್ತರಪ್ರದೇಶ, ಮಾ 12 (MSP): ಗರ್ಭಿಣಿ ಯುವತಿಯೊಬ್ಬಳು ಯೂಟ್ಯೂಬ್ ನೋಡಿ ಸ್ವಯಂ ಹೆರಿಗೆ ಮಾಡಿಕೊಳ್ಳಲು ಯತ್ನಿಸಿ, ಮಗುವಿನೊಂದಿಗೆ ಯುವತಿಯೂ ಮೃತಪಟ್ಟ ದಾರುಣ ಘಟನೆ ಉತ್ತರ ಪ್ರದೇಶದ ಗೋರಖ್’ಪುರದಲ್ಲಿ ನಡೆದಿದೆ.
26 ವರ್ಷದ ಯುವತಿಯೂ ಅವಿವಾಹಿತೆಯಾಗಿದ್ದು, ಗರ್ಭಿಣಿಯಾಗಿದ್ದಳು. ಆಕೆ ಪ್ರಸವ ವೇದನೆ ಪ್ರಾರಂಭವಾದಾಗ ಯೂಟ್ಯೂಬ್’ನಲ್ಲಿ ಹೆರಿಗೆಯ ವೀಡಿಯೋ ನೋಡುತ್ತಲೇ ಆಕೆ ಸ್ವಯಂ ಹೆರಿಗೆ ಮಾಡಿಕೊಳ್ಳಲು ಮುಂದಾಗಿದ್ದಾಳೆ.ಆದರೆ ಆಕೆಯ ಪ್ರಯತ್ನ ವಿಫಲವಾಗಿ ನವಜಾತ ಗಂಡುಶಿಶು ಹಾಗೂ ಮಹಿಳೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋರಖ್ ಪುರದ ಬಿಲಂದ್ ಶಹರ್ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಯುವತಿ ವಿವಾಹಕ್ಕೆ ಮುನ್ನವೇ ತಾಯಿಯಾಗಿರುವ ಕಾರಣ ಸಾಮಾಜಿಕ ಕಳಂಕದ ಭಯದಲ್ಲಿ ಸ್ವತಃ ಹೆರಿಗೆಗೆ ಯತ್ನಿಸಿರುವ ಸಾಧ್ಯತೆಯಿದ್ದು, ಇದಕ್ಕೆ ಪೂರಕವೆಂಬಂತೆ ವೈದ್ಯರ ಸಹಾಯವಿಲ್ಲದೇ ಸ್ವತಃ ಮಗುವಿಗೆ ಜನ್ಮ ನೀಡುವುದು ಹೇಗೆ ಎಂಬ ವಿಡಿಯೋ ಮತ್ತು ಅದೇ ರೀತಿಯ ಇತರ ಸುರಕ್ಷಿತ ಹೆರಿಗೆಯ ವಿಡಿಯೋವನ್ನು ಯೂ ಟ್ಯೂಬ್ನಲ್ಲಿ ಆಕೆಯ ಸ್ಮಾರ್ಟ್ ಫೋನ್ ಮೂಲಕ ವೀಕ್ಷಿಸಿದ್ದಾಗಿಯೂ ಪೊಲೀಸರು ತಿಳಿಸಿದ್ದಾರೆ.
ಯುವತಿಯೂ ಬಾಡಿಗೆ ಮನೆಯಲ್ಲಿ ವಾಸವಿದ್ದು, ಮಾ.11 ರ ಸೋಮವಾರ ಮುಂಜಾನೆ ಆಕೆ ಬಾಡಿಗೆ ಪಡೆದಿದ್ದ ರೂಂನ ಹೊರಗೆ ರಕ್ತದ ಕೋಡಿ ಹರಿದಿದ್ದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಮನೆ ಮಾಲೀಕರಿಗೆ ಸುದ್ದಿ ಮುಟ್ಟಿಸಿದ್ದರು. ಈ ಹಿನ್ನಲೆಯಲ್ಲಿ ಅಲ್ಲಗೆ ಬಂದ ಮನೆ ಮಾಲಿಕ ರವಿ ಉಪಾಧ್ಯಾಯ, ಕೊಠಡಿಯ ಬಾಗಿಲು ಒಡೆದು ನೋಡಿದಾಗ ಯುವತಿ ಹಾಗೂ ನವಜಾತ ಶಿಶು ಶವ ಪತ್ತೆಯಾಗಿತ್ತು.
ಮನೆ ಮಾಲೀಕ ನೀಡಿದ ದೂರಿನಂತೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮಹಿಳೆಯ ಮೃತದೇಹದ ಬಳಿ ಕತ್ತರಿ, ಬ್ಲೇಡ್ ಹಾಗೂ ಕೆಲವು ದಾರಗಳು ಪತ್ತೆಯಾಗಿವೆ. ಹೀಗಾಗಿ ಪೊಲೀಸರು ಯುವತಿಯೂ ಯೂಟ್ಯೂಬ್ನ್ನು ವೀಕ್ಷಿಸಿ ಮಗುವಿಗೆ ಜನ್ಮ ನೀಡಲು ಯತ್ನಿಸಿರುವುದಾಗಿ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದ್ದಾರೆ.