ಮಡಿಕೇರಿ, ಜ.12 (DaijiworldNews/HR): ಮನುಷ್ಯನ ಮೇಲೆ ಹುಲಿಗಳು ಎದುರು ಭಾಗದಿಂದ ನೇರವಾಗಿ ದಾಳಿ ಮಾಡುವುದಿಲ್ಲ, ಬದಲಾಗಿ ಹಿಂಬದಿಯಿಂದ ದಾಳಿ ಮಾಡುತ್ತವೆ. ಇದರಿಂದ ಪಾರಾಗಲು ಪಶ್ಚಿಮ ಬಂಗಾಲದ ಸುಂದರ ಬನ್ ವ್ಯಾಪ್ತಿಯಲ್ಲಿ ತಲೆಯ ಹಿಂಭಾಗಕ್ಕೆ ಮುಖವಾಡವನ್ನು ಅಳವಡಿಸಿಕೊಳ್ಳುವ ತಂತ್ರಗಾರಿಕೆಯನ್ನು ಅನುಸರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಮಾದರಿ ಕೊಡಗು ಜಿಲ್ಲೆಯಲ್ಲೂ ಉಪಯುಕ್ತವಾಗಬಹುದು ಎಂದು ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಕರ್ನಲ್ ಸಿ.ಪಿ. ಮುತ್ತಣ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಲದಲ್ಲಿ ಬ್ರಹ್ಮಪುತ್ರ ನದಿ ಸಮುದ್ರವನ್ನು ಸೇರುವ ಸುಂದರಬನ್ನಲ್ಲಿ ಹುಲಿ ದಾಳಿಗೆ ಸಾಕಷ್ಟು ಮಂದಿ ಸಾವನ್ನಪ್ಪಿದ್ದು, ಅಲ್ಲಿ ಇದೀಗ ತಲೆಯ ಹಿಂಭಾಗಕ್ಕೆ ಅಳವಡಿಸುವ ಮುಖ ವಾಡ ಬಳಸಲಾಗುತ್ತಿದೆ.
ಇನ್ನು ಈ ರೀತಿಯಾಗಿ ಮುಖವಾಡ ಧರಿಸುವುದರಿಂದ ಹುಲಿ ದಾಳಿ ಪ್ರಕರಣಗಳು ಕಡಿಮೆಯಾಗಿದ್ದು, ಈ ಮುಖವಾಡ ಧರಿಸಿದಲ್ಲಿ, ದಾಳಿ ಮಾಡುವ ಹುಲಿಗೆ ವ್ಯಕ್ತಿಯ ಹಿಂಭಾಗದ ಮುಖವಾಡ ವ್ಯಕ್ತಿಯ ಮುಖ ದಂತೆ ಗೋಚರಿಸುವುದರಿಂದ ದಾಳಿಗೆ ಮುಂದಾಗುವುದಿಲ್ಲ ಎನ್ನಲಾಗಿದೆ.
ಕೊಡಗು ಜಿಲ್ಲೆಯ ದಕ್ಷಿಣ ಭಾಗದಲ್ಲಿ ಹುಲಿಹಾವಳಿ ಹೆಚ್ಚಾಗುತ್ತಿದ್ದು, ಈಗಾಗಲೆ ಐವರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ರಬ್ಬರ್ನಿಂದ ಸಿದ್ಧಪಡಿಸಿದ ಮುಖವಾಡವನ್ನು ಬಳಸುವುದಕ್ಕೆ ಕ್ರಮ ಕೈಗೊಳ್ಳುವಂತೆ ಸರಕಾರ ಮತ್ತು ಅರಣ್ಯ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಿರುವುದಾಗಿ ಮುತ್ತಣ್ಣ ಅವರು ತಿಳಿಸಿದ್ದಾರೆ.