ನವದೆಹಲಿ,ಮಾ.10(AZM):ಯಾವುದೇ ರಾಜಕೀಯ ಪಕ್ಷವನ್ನು ಭಾರತೀಯ ಸೇನೆ ಬಿಂಬಿಸುವುದಿಲ್ಲ. ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಯಾವುದೇ ಪಕ್ಷಗಳು ಭಾರತೀಯ ಯೋಧರ ಅಥವಾ ಸೇನೆಯ ಭಾವಚಿತ್ರಗಳನ್ನು ಬಳಸಬಾರದೆಂದು ಚುನಾವಣಾ ಆಯೋಗ ತಿಳಿಸಿದೆ.
ಶನಿವಾರ ಈ ಕುರಿತು ಮಾಹಿತಿ ನೀಡಿದ ಚುನಾವಣಾ ಆಯೋಗ, “ಚುನಾವಣೆ ಪ್ರಚಾರ ಕಾರ್ಯಕ್ಕೆ ಸೇನಾ ಸಿಬ್ಬಂದಿಗಳ ಭಾವಚಿತ್ರಗಳನ್ನು ಕೆಲ ಪಕ್ಷಗಳು ಬಳಕೆ ಮಾಡಿಕೊಳ್ಳುತ್ತಿರುವ ವಿಚಾರವನ್ನು ಭದ್ರತಾ ಇಲಾಖೆ ನಮ್ಮ ಗಮನಕ್ಕೆ ತಂದಿದೆ. ಈ ಹಿನ್ನೆಲೆಯಲ್ಲಿ ನಾವು ಈ ಪ್ರಕಟಣೆ ಹೊರಡಿಸಿದ್ದೇವೆ,” ಎಂದು ಆಯೋಗ ತಿಳಿಸಿದೆ.
2014ರ ಲೋಕಸಭೆಗೂ ಮೊದಲು ಚುನಾವಣಾ ಆಯೋಗ ಇದೇ ರೀತಿಯ ಪ್ರಕಟಣೆಯನ್ನು ಹೊರಡಿಸಿತ್ತು. ಈ ವೇಳೆ ಭದ್ರತಾ ಸಿಬ್ಬಂದಿಗಳ ಭಾವಚಿತ್ರವನ್ನು ಬಳಕೆ ಮಾಡಿಕೊಳ್ಳಬಾರದೆಂದು ಎಚ್ಚರಿಕೆ ನೀಡಿತ್ತು. ಹಾಗಾಗಿ ಪುನಃ ಸೇನೆಯ ಭಾವಚಿತ್ರ ಬಳಕೆ ಆದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ತಿಳಿಸಿದೆ.