ಗುವಾಹಟಿ, ಜ 10 (DaijiworldNews/DB): ನೂತನವಾಗಿ ಆರಂಭವಾಗಲಿರುವ ವಿಶ್ವದ ಅತಿ ಉದ್ದದ ನದಿ ಕ್ರೂಸ್ ಗಂಗಾ ವಿಲಾಸ್ನಲ್ಲಿ ಪ್ರಯಾಣಿಸಬೇಕೆಂಬ ಕನಸು ನಿಮ್ಮದಾಗಿದ್ದರೆ 12.59 ಲಕ್ಷ ರೂ.ಗಳನ್ನು ತೆಗೆದಿಟ್ಟುಕೊಳ್ಳಿ!
ಹೌದು.ಗಂಗಾವಿಲಾಸ್ನ ಪ್ರಯಾಣದರದ ಬಗ್ಗೆ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಮತ್ತು ಆಯುಷ್ ಸರ್ಬಾನಂದ ಸೋನೋವಾಲ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಪ್ರತಿದಿನದ ದರ 24692.25 ರೂ. ಆಗುತ್ತದೆ ಎಂದು ತಿಳಿಸಿದ್ದಾರೆ.
ಗಂಗಾವಿಲಾಸ್ ಕ್ರೂಸ್ ವಾರಣಾಸಿಯಿಂದ ಅಸ್ಸಾಂನ ದಿಬ್ರುಗಢ್ವರೆಗೆ ಸಂಚರಿಸುತ್ತದೆ. ಒಟ್ಟು 51 ದಿನಗಳ ಕಾಲ 3,200 ಕಿ.ಮೀ ಗಿಂತಲೂ ಹೆಚ್ಚು ದೂರವನ್ನು ಕ್ರಮಿಸಿ ದಿಬ್ರುಗಢ್ ತಲುಪುತ್ತದೆ. ಇದರಲ್ಲಿ ಪ್ರಯಾಣಿಸಲು ಭಾರತೀಯರಿಗೆ ಮತ್ತು ವಿದೇಶಿಯರಿಗೆ ಒಂದೇ ದರ ನಿಗದಿಪಡಿಸಲಾಗಿದೆ. ದಿನವೊಂದಕ್ಕೆ ಓರ್ವ ಪ್ರಯಾಣಿಕನಿಗೆ 24692.25 ರೂಪಾಯಿ ನಿಗದಿಪಡಿಸಲಾಗಿದೆ. ಅಂದರೆ 51 ದಿನಗಳ ಕಾಲದ ಸಂಚಾರಕ್ಕೆ 12.59 ಲಕ್ಷ ರೂ.ಗಳಾಗುತ್ತವೆ ಎಂದವರು ವಿವರಿಸಿದ್ದಾರೆ.
ವಿಶ್ವದ ಅತೀ ಉದ್ದದ ನದಿ ಕ್ರೂಸ್ ಗಂಗಾ ವಿಲಾಸ್ ಇದಾಗಿದೆ. ಈ ಹಡಗು 62 ಮೀಟರ್ ಉದ್ದ ಮತ್ತು 12 ಮೀಟರ್ ಅಗಲವನ್ನು ಹೊಂದಿದ್ದು, ಮೂರು ಡೆಕ್ಗಳು, 36 ಪ್ರಯಾಣಿಕರ ಸಾಮರ್ಥ್ಯದ 18 ಸೂಟ್ಗಳು ಮತ್ತು ಐಷಾರಾಮಿ ಅನುಭವ ನೀಡುವ ಎಲ್ಲಾ ಸೌಕರ್ಯಗಳನ್ನು ಹೊಂದಿದೆ ಎಂದರು.
ಇನ್ನು ಕ್ರೂಸ್ ಲೋಕಾರ್ಪಣಾ ದಿನವಾದ ಜನವರಿ 13ರಂದು ಇದರಲ್ಲಿ ಸಂಚರಿಸಲು 36 ಮಂದಿ ಕಾಯ್ದಿರಿಸಿದ್ದು, ಇವರೆಲ್ಲರೂ ಸ್ವಿಸ್ ಪ್ರಜೆಗಳು. ಈ ಪೈಕಿ 14 ಮಂದಿ ಕೋಲ್ಕತ್ತಾದಲ್ಲಿ ಇಳಿಯಲಿದ್ದು, ಅಷ್ಟೇ ಮಂದಿ ಮತ್ತೆ ಕೋಲ್ಕತ್ತಾದಿಂದ ಹತ್ತಲಿದ್ದಾರೆ ಎಂದವರು ವಿವರಿಸಿದರು.
ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಬಾಂಗ್ಲಾದೇಶ, ಅಸ್ಸಾಂ ಮೂಲಕ ಕ್ರೂಸ್ ಸಾಗುತ್ತದೆ. ಇಲ್ಲೆಲ್ಲಾ ಕ್ರೂಸ್ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಬಾಂಗ್ಲಾದೇಶದ 50 ಸ್ಥಳಗಳಲ್ಲಿಯೂ ಕ್ರೂಸ್ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ನಿಲುಗಡೆ ವೇಳೆ ಪ್ರವಾಸಿಗರಿಗೆ ಸಾಂಸ್ಕೃತಿಕ ಮತ್ತು ಪಾರಂಪರಿಕ ತಾಣಗಳ ಭೇಟಿಯೂ ಇರುತ್ತದೆ ಎಂದು ಸೋನೋವಾಲ್ ತಿಳಿಸಿದರು.