ಬೆಂಗಳೂರು, ಜ 08 ( DaijiworldNews/MS): ರಾಜಕೀಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿರುವ ಸ್ಯಾಂಟ್ರೋ ರವಿ ಅಲಿಯಾಸ್ ಕೆ.ಎಸ್ ಮಂಜುನಾಥ್ ಬಂಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಸ್ಯಾಂಟ್ರೋ ರವಿ ವಿಪಕ್ಷ ನಾಯಕರ ಜತೆಗೂ ಸಂಪರ್ಕದಲ್ಲಿದ್ದು, ಆತನ ಕಳೆದ 20 ವರ್ಷಗಳ ಎಲ್ಲ ದಂಧೆಗಳ ಬಗ್ಗೆಯೂ ತನಿಖೆ ನಡೆಸುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.
ಈ ನಡುವೆ ಬಿಜೆಪಿ ಸರಣಿ ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಾಗಲಿ, ಅವರ ಪುತ್ರ ಭರತ್ ಬೊಮ್ಮಾಯಿ ಅವರಿಗಾಗಲಿ ಸ್ಯಾಂಟ್ರೊ ರವಿ ಎಂಬಾತನ ಜತೆ ಸಂಬಂಧವಿಲ್ಲ ಎಂದು ಬಿಜೆಪಿ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ.
"ಮುಖ್ಯಮಂತ್ರಿಗಳ ಮನೆಗೆ ಅನೇಕರು ಬಂದು ಹೋಗುತ್ತಾರೆ. ಅಲ್ಲಿ ಬಂದವರು ಸಿಎಂ ಹಾಗೂ ಅವರ ಕುಟುಂಬದ ಜೊತೆ ಫೋಟೋ ತೆಗೆಸಿಕೊಂಡು ಹೋಗುವುದು ಸಾಮಾನ್ಯ. ಸ್ಯಾಂಟ್ರೊ ರವಿ ಎಂಬಾತ ಕೂಡ ಅದೇ ರೀತಿ ಫೋಟೊ ತೆಗೆಸಿಕೊಂಡಿರಬಹುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗಾಗಲಿ, ಅವರ ಪುತ್ರ ಭರತ್ ಬೊಮ್ಮಾಯಿ ಅವರಿಗಾಗಲಿ ಸ್ಯಾಂಟ್ರೊ ರವಿ ಎಂಬಾತನ ಜೊತೆ ಯಾವುದೇ ಸಂಬಂಧವಿರುವುದಿಲ್ಲ. ವಿರೋಧ ಪಕ್ಷಗಳ ಸುಳ್ಳಿನ ಕಾರ್ಖಾನೆಗಳಲ್ಲಿ ತಯಾರಾದ ಪ್ರಾಡಕ್ಟ್ಗಳಿವು"ಎಂದು ಟ್ವೀಟ್ ಮಾಡಲಾಗಿದೆ.