ನವದೆಹಲಿ,ಮಾ,08 (MSP): ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಮಂಡ್ಯದಿಂದ ನಾನು ಪಕ್ಷೇತರಳಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಸ್ಪರ್ಧಿಸುವುದಾಗಿ ಘೋಷಿಸಿರುವ ನಟಿ ಸುಮಲತಾ ಅಂಬರೀಷ್ ವಿರುದ್ದ, ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಮಾ.8 ರ ಶುಕ್ರವಾರ ಗರಂ ಆಗಿದ್ದಾರೆ.
ನವದೆಹಲಿಯ ಕರ್ನಾಟಕ ಭವನದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ’ಪತಿ ಅಂಬರೀಷ್ ಸತ್ತು ಇನ್ನು ಒಂದೆರಡು ತಿಂಗಳಾಗಿಲ್ಲ. ಇಂತಹ ಸಂದರ್ಭದಲ್ಲಿ ಸುಮಲತಾ ಅವರಿಗೆ ರಾಜಕೀಯ ಯಾಕೆ ಬೇಕಿತ್ತು’ ಎಂದು ಅವರು ನಟಿ ಸುಮಲತಾ ವಿರುದ್ದ ವಾಗ್ದಳಿ ನಡೆಸಿದ್ದಾರೆ.
ಅಂಬರೀಷ್ ಅವರು ಮೃತಪಟ್ಟಾಗ ,ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮನೆಯ ಸದಸ್ಯರಂತೆ ಮುಂದೆ ನಿಂತು ಜವಬ್ದಾರಿ ನಿಭಾಯಿಸಿ, ಕಂಬನಿ ಮಿಡಿದಿದ್ದರು. ಇದ್ಯಾವುದನ್ನು ಪರಿಗಣಿಸದೆ ಚುನಾವಣೆ ಸ್ಪರ್ಧೆ ಮಾಡುವುದಾಗಿ ಹೇಳಿ ಸುಮಲತಾ , ಜೆಡಿಎಸ್ ಗೆ ಸವಾಲು ಹಾಕಿದ್ದಾರೆ ’ ಎಂದು ಅಸಮಧಾನ ವ್ಯಕ್ತಪಡಿಸಿದರು. ಇದೀಗ ಸುಮಲತಾ ಅವರ ಸವಾಲ್ ನ್ನು ಸ್ವೀಕರಿಸುವಂತೆ ಅನಿವಾರ್ಯ ಸೃಷ್ಟಿ ಆಗಿದೆ ಎಂದ ರೇವಣ್ಣ ವಿವರಿಸಿದರು.
ಇದಕ್ಕೂ ಮೊದಲು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಸ್ಪರ್ಧೆ ಬಗ್ಗೆ ಆಲೋಚನೆ ಇರಲಿಲ್ಲ. ಕೃತಜ್ಞತೆ ಲವಲೇಶವೂ ಇಲ್ಲದ ಸುಮಲತಾ ಅವರ ಸವಾಲನ್ನು ಸ್ವೀಕರಿಸಿಯೇ ಸ್ಪರ್ಧೆಯ ವಿಚಾರ ಮಾಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.