ನವದೆಹಲಿ, ಜ 01 (DaijiworldNews/DB): ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿನ ವೃದ್ಧಾಶ್ರಮವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ಭಾನುವಾರ ಮುಂಜಾನೆ ನಡೆದಿದೆ.
ಅಂಟಾರಾ ಕೇರ್ ಫಾರ್ ಸೀನಿಯರ್ಸ್ ವೃದ್ಧಾಶ್ರಮದಲ್ಲಿ ಮುಂಜಾನೆ 5.14ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಐದು ಅಗ್ನಿಶಾಮಕ ವಾಹನಗಳು ಮತ್ತು ಆಂಬುಲೆನ್ಸ್ಗಳು ಸ್ಥಳಕ್ಕೆ ಧಾವಿಸಿದ್ದು, ಏಳು ಗಂಟೆ ಸುಮಾರಿಗೆ ಬೆಂಕಿ ನಂದಿಸಲಾಗಿದೆ. ಬೆಂಕಿ ಸಂಪೂರ್ಣ ನಂದಿಸಿದ ಬಳಿಕ ಮೂರನೇ ಮಹಡಿಯಲ್ಲಿ ಎರಡು ಮಂದಿಯ ಶವಗಳು ಪತ್ತೆಯಾಗಿವೆ. ಶವಗಳು ಸಂಪೂರ್ಣ ಸುಟ್ಟು ಹೋಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯಲ್ಲಿ ಕೆಲವು ಹಿರಿಯ ನಾಗರಿಕರು ಗಾಯಗೊಂಡಿದ್ದು, ಗಾಯಾಳುವೊಬ್ಬರನ್ನು ಮ್ಯಾಕ್ಸ್ ಆಸ್ಪತ್ರೆ ಸಾಕೇತ್ಗೆ ಮತ್ತು 12 ಮಂದಿಯನ್ನು ಅಂಟಾರಾ ಕೇರ್ನ ಓಖ್ಲಾದಲ್ಲಿರುವ ಇನ್ನೊಂದು ಶಾಖೆಗೆ ಸ್ಥಳಾಂತರಿಸಲಾಗಿದೆ.
ಪೊಲೀಸರ ಪ್ರಕಾರ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಪರಾಧ ಮತ್ತು ಎಫ್ಎಸ್ಎಲ್ ತಂಡಗಳನ್ನು ಕರೆಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಚಂದನ್ ಚೌಧರಿ ತಿಳಿಸಿದ್ದಾರೆ.