ಲಕ್ನೋ, ಡಿ 31 (DaijiworldNews/DB): ಕ್ಯಾನ್ಸರ್ನಿಂದ ಬಳಲುತ್ತಿದ್ದ ಲಕ್ನೋ ನವಾಬ್ ವಾಜಿದ್ ಅಲಿ ಶಾ ಝೂಲಾಜಿಕಲ್ ಪಾರ್ಕ್ನಲ್ಲಿದ್ದ ’ಕಿಶನ್’ ಎಂಬ ಗಂಡು ಹುಲಿ ಶುಕ್ರವಾರ ಮೃತಪಟ್ಟಿದೆ.
ಸುಮಾರು 13 ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಹುಲಿಗೆ ದೀರ್ಘಕಾಲೀನ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಸಾವನ್ನಪ್ಪಿದೆ. 2009ರ ಮಾರ್ಚ್ 1ರಂದು ಈ ಹುಲಿಯನ್ನು ಝೂಲಾಜಿಕಲ್ ಪಾರ್ಕ್ಗೆ ತರಲಾಗಿತ್ತು.
ಕಿಶನ್ ಹುಲಿಯನ್ನು ಆರೋಗ್ಯ ತಜ್ಞರು ಪರೀಕ್ಷಿಸಿದಾಗ ಆತನಿಗೆ ಹೆಮಾಂಜಿಯೊಸಾರ್ಕೊನೊಮಾ ಸೋಂಕು ಬಾಧಿಸಿರುವುದು ತಿಳಿದು ಬಂದಿತ್ತು. ಕ್ಯಾನ್ಸರ್ನಿಂದಾಗಿ ಕಾಡು ಪ್ರಾಣಿಗಳ ಭೇಟೆ ಸಾಧ್ಯವಾಗದೆ ಸ್ಥಳೀಯರ ಮೇಲೆ ದಾಳಿಗೂ ಮುಂದಾಗುತ್ತಿತ್ತು. ಬಳಿಕ ಅದನ್ನು ಲುಕೋ ಪಾರ್ಕ್ಗೆ ಕೊಂಡೊಯ್ಯಲಾಗಿತ್ತು. ಬಳಿಕ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಹದಿಮೂರು ವರ್ಷಗಳ ಕಾಲ ಕ್ಯಾನ್ಸರ್ನೊಂದಿಗೆ ಹೋರಾಟ ನಡೆಸಿದ್ದ ಕಿಶನ್ಗೆ ಕೊನೆ ವೇಳೆಯಲ್ಲಿ ಬಾಯಿ, ಕಿವಿಗೂ ಕ್ಯಾನ್ಸರ್ ಹಬ್ಬಿತ್ತು ಎಂದು ತಿಳಿದು ಬಂದಿದೆ.
ಉದ್ಯಾನವನದ ನಿರ್ದೇಶಕ ವಿ.ಕೆ. ಮಿಶ್ರಾ, ವನ್ಯಜೀವಿ ವೈದ್ಯಾಧಿಕಾರಿ ಹಾಗೂ ಝೂಲಾಜಿಕಲ್ ಪಾರ್ಕ್ ಸಿಬ್ಬಂದಿ ಹುಲಿಗೆ ಭಾವಪೂರ್ಣ ಕೊನೆಯ ವಿದಾಯ ಹೇಳಿದರು.