ಉಡುಪಿ, ಮಾರ್ಚ್ 07(SM): ಕಳೆದ ಜುಲೈ ತಿಂಗಳಲ್ಲಿ ಸುರಿದ ಗಾಳಿ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 169ರ ತೀರ್ಥಹಳ್ಳಿ-ಉಡುಪಿ ರಸ್ತೆಯ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತದಿಂದ ರಸ್ತೆಗೆ ಹಾನಿಯಾಗಿದ್ದು ದುರಸ್ತಿ ಕಾರ್ಯಾ ಮಾರ್ಚ್ 19ರಿಂದ ಆರಂಭಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 19ರಿಂದ ೩೦ದಿನಗಳಾ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಆಗುಂಬೆ ಘಾಟಿಯಲ್ಲಿ33.70 ಕಿ.ಮೀ, 7ನೇ ತಿರುವಿನಲ್ಲಿ 35.60ಕಿ.ಮೀ. ಮತ್ತು ಆನೆ ಬಂಡೆಯ 37ಕಿ.ಮೀಗಳಲ್ಲಿ ಗುಡ್ಡ ಕುಸಿತ ಉಂಟಾಗಿ ಭಾಗಶಃ ರಸ್ತೆ ಕುಸಿದಿರುವುದರಿಂದ ಈ ಪ್ರದೇಶಗಳಲ್ಲಿ ಶಾಶ್ವತ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ.
ಈ ಹಿಂದೆ ಮಾರ್ಚ್ 1 ರಿಂದ 31 ರ ವರೆಗೆ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಿ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚರಿಸುವಂತೆ ಅಧಿಸೂಚನೆ ಹೊರಡಿಸಲಾಗಿತ್ತು. ಮಾರ್ಚ್ 1 ರಿಂದ 18 ರ ವರೆಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಘಾಟಿ ರಸ್ತೆಯನ್ನು ಬಳಸಿ ವಿದ್ಯಾರ್ಥಿಗಳು ಹೆಬ್ರಿ-ಆಗುಂಬೆ-ಶೃಂಗೇರಿ ಮಾರ್ಗಗಳನ್ನು ಬಳಸಿ ಪರೀಕ್ಷೆಗೆ ತೆರಳಬೇಕಾಗಿರುವುದರಿಂದ ಘಾಟಿ ರಸ್ತೆಯ ಸಂಚಾರವನ್ನು ದುರಸ್ಥಿಯನ್ನು ಮುಂದೂಡಲಾಗಿತ್ತು.
ಫೆಬ್ರವರಿ 28 ರ ಪರೀಷ್ಕೃತ ಅಧಿಸೂಚನೆಯಲ್ಲಿ ಮಾರ್ಚ್ 19 ರಿಂದ 30 ದಿನಗಳ ಕಾಲ ಸ್ಥಗಿತಗೊಳಿಸಿ ಬದಲಿ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆಯನ್ನು ಮಾಡಿ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿದ್ದಾರೆ.
ಮಾರ್ಚ್ 19 ರಿಂದ 30 ದಿನಗಳ ಕಾಲ ಆಗುಂಬೆ ಘಾಟಿ ವ್ಯಾಪ್ತಿಯಲ್ಲಿ ಸಂಚರಿಸುವ ಲಘು ವಾಹನಗಳಾದ ಸಾಮಾನ್ಯ ಬಸ್ಗಳು, ಜೀಪು, ವ್ಯಾನ್, ದ್ವಿಚಕ್ರ ವಾಹನಗಳು, ಉಡುಪಿ-ಕಾರ್ಕಳ-ಮಾಳಾಘಾಟ್-ಶೃಂಗೇರಿ-ಕೊಪ್ಪ-ತೀರ್ಥಹಳ್ಳಿ ರಸ್ತೆಯಲ್ಲಿ ಸಂಚರಿಸುವಂತೆ, ಘನ ವಾಹನಗಳಾದ ರಾಜಹಂಸ, ಐರಾವತಾ ಬಸ್ಗಳು ಮತ್ತು ಖಾಸಗಿ ಐಶಾರಾಮಿ ಬಸ್ಗಳು, ಬುಲೆಟ್ ಟ್ಯಾಂಕರ್ ಗಳು, ಕಾರ್ಗೋ ಕಂಟೈನರ್ ಗಳು, ಲಾಂಗ್ ಚಾಸೀಸ್ಗಳು, ಉಡುಪಿ-ಕುಂದಾಪುರ-ಸಿದ್ದಾಪುರ-ಹೊಸಂಗಡಿ-ಮಾಸ್ತಿಕಟ್ಟೆ-ತೀರ್ಥಹಳ ಹೆದ್ದಾರಿಯಲ್ಲಿ ಸಂಚರಿಸುವಂತೆ ಆದೇಶ ಹೊರಡಿಸಲಾಗಿದೆ.
ಕಾಮಗಾರಿ ನಡೆಯುವ ವೇಳೆ ನಿಷೇಧಿತ ಮಾರ್ಗದಲ್ಲಿ ಯಾವುದೇ ವಾಹನ ಸಂಚರಿಸದಂತೆ ಮತ್ತು ಕಾಮಗಾರಿಗೆ ಅಡಚಣೆಯಾಗದಂತೆ ಸೂಕ್ತ ಸ್ಥಳಗಳಲ್ಲಿ ಫಲಕಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ನೀಡಿದ್ದಾರೆ.