ಬೆಂಗಳೂರು,ಮಾ.07(AZM):ಮಾ.11 ರಂದು ದಿಲ್ಲಿಯಲ್ಲಿ ಚುನಾವಣಾ ಪರಿಶೀಲನಾ ಸಮಿತಿ ಸಭೆ ನಡೆಯಲಿದ್ದು, ಆ ಬಳಿಕ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸ್ತುತ ಸಂಸದರಿರುವ ಹನ್ನೆರಡು ಕ್ಷೇತ್ರಗಳನ್ನು ಬಿಟ್ಟು ಉಳಿದ ಕ್ಷೇತ್ರಗಳ ಬಗ್ಗೆ ಚರ್ಚೆ ಈಗಾಗಲೇ ಮಾಡಲಾಗಿದೆ ಎಂದ ಅವರು,ರಾಜ್ಯದಲ್ಲಿ 10 ಕಾಂಗ್ರೆಸ್ ಹಾಗೂ ಎರಡು ಜೆಡಿಎಸ್ ಸಂಸದರಿದ್ದಾರೆ. ಅದಲ್ಲದೆ, ಶಿವಮೊಗ್ಗವನ್ನು ಜೆಡಿಎಸ್ಗೆ ಬಿಟ್ಟುಕೊಡಲು ನಿರ್ಧರಿಸಲಾಗಿದೆ ಎಂದರು.
ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿದೆ. ಸಾಮಾಜಿಕ ನ್ಯಾಯ ನೀಡಬೇಕು ಮತ್ತು ಮಹಿಳೆಯರಿಗೂ ಟಿಕೆಟ್ ನೀಡಬೇಕು ಎಂದು ಕೇಳಿದ್ದಾರೆ. ಬೆಂಗಳೂರು ಕೇಂದ್ರ, ಹಾವೇರಿ, ಬೀದರ್ನಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಗಳು ಬಂದಿವೆ. ಈ ಸಂಬಂಧ ಚರ್ಚೆ ನಡೆದಿದ್ದು, ಹೈಕಮಾಂಡ್ಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಪರಿಶೀಲನಾ ಸಮಿತಿ ಬಳಿಕ, ಚುನಾವಣಾ ಸಮಿತಿ ಅಭ್ಯರ್ಥಿಗಳನ್ನು ಅಂತಿಮ ಮಾಡಲಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯ ಗಮನದಲ್ಲಿಟ್ಟುಕೊಂಡು ಎಲ್ಲ ವರ್ಗಗಳಿಗೂ ಆದ್ಯತೆ ನೀಡುತ್ತದೆ. ಇದುವರೆಗೂ ಸ್ವೀಕಾರವಾಗಿರುವ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳ ಪಟ್ಟಿ ತಯಾರಾಗಲಿದ್ದು, ಅಂತಿಮವಾಗಿ ಹೈಕಮಾಂಡ್ ಅದನ್ನು ತೀರ್ಮಾನ ಮಾಡಲಿದೆ ಎಂದು ಮಾಹಿತಿ ನೀಡಿದರು.