ಬೆಂಗಳೂರು,ಮಾ,07(AZM):ಎಂಬೆಸಿ ಗಾಲ್ಫ್ ಲಿಂಕ್ನ ಹಿಲ್ಟನ್ ಹೋಟೆಲ್ನಲ್ಲಿ ಅಂತರ ರಾಷ್ಟೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಇಂದು ಮಹಿಳಾ ದಿನಾಚರಣೆ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಯುಎನ್ಪಿಎಫ್ ಗುಡ್ವಿಲ್ ರಾಯಬಾರಿ ಹಾಗೂ ಕ್ಯಾನ್ಸರ್ ಜಾಗೃತಿಯ ಕಾರ್ಯದಲ್ಲಿ ತೊಡಗಿರುವ ಜನಪ್ರಿಯ ನಟಿ ಮನಿಷಾ ಕೋಯಿರಾಲಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಮನಿಷಾ ಕೋಯಿರಾಲಾ ಅವರು, ನನ್ನ ಪ್ರಕಾರ ಮಹಿಳೆಯರು ಇಂದು ಕಾಲ ಬದಲಾಗುತ್ತಿದ್ದು, ತಮ್ಮ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುವ ಕಾರ್ಯ ಮಾಡಬೇಕು. ಅಲ್ಲದೇ ವಿವಿಧ ಕ್ಷೇತ್ರಗಳಿಗೆ ಕೊಡುಗೆ ನೀಡುವ ಸಾಮರ್ಥ್ಯ ಮಹಿಳೆಯರಿಗೆ ಇದ್ದು, ಅದನ್ನವರು ಅರಿಯಬೇಕು. ಮನೆಯಲ್ಲೇ ಇದ್ದು ಕುಟುಂಬ ನೋಡಿಕೊಳ್ಳುವ ಮಹಿಳೆ ಕೂಡ ಹೊರಗೆ ಹೋಗಿ ಉದ್ಯೋಗ ಮಾಡುವ ಮಹಿಳೆಯರಷ್ಟೇ ತಮ್ಮ ಕುಟುಂಬದ ಕಾಳಜಿಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸುತ್ತಾರೆ ಎಂದರು.
ಇನ್ನು ತಾವು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಅನುಭವಿಸಿದ ಕಷ್ಟ ಹಾಗೂ ತಮ್ಮ "ಹೀಲ್ಡ್' ಕೃತಿಯ ಕುರಿತು ಮಾತನಾಡಿದ ಮನಿಷಾ "ಕ್ಯಾನ್ಸರ್ ನಿಂದ ಬದುಕು ಗೆದ್ದು ಬಂದ ನನ್ನ ಜೀವನ ಹೊಸ ಗುತ್ತಿಗೆಯ ಸಮಯವನ್ನು ಪಡೆದಿದೆ. ಇದೀಗ ಲಭಿಸಿರುವ ತನ್ನ ಜೀವನವನ್ನು ತೆರೆದ ಕೈಗಳಿಂದ ತಬ್ಬಿಕೊಂಡಿದ್ದೇನೆ. ಬದುಕು ಒಂದು ಉಡುಗೊರೆ ಅನ್ನುವ ಅನುಭವ ನಾನು ಕ್ಯಾನ್ಸರ್ ನಿಂದ ಚೇತರಿಸಿಕೊಳ್ಳುತ್ತಿದ್ದ ಸಂದರ್ಭ ಭಾಸವಾಗುತ್ತಿತ್ತು. ಧೈರ್ಯವಾಗಿರುವುದು ಒಂದು ಆಯ್ಕೆ ಮಾತ್ರವಲ್ಲ, ಜೀವ ತೆಗೆಯುವ ರೋಗಗಳು ನಮ್ಮನ್ನು ಕಾಡಿದಾಗ ನಿಜಕ್ಕೂ ಇದನ್ನು ನೀವು ಹೊಂದಲೇ ಬೇಕಾಗುತ್ತದೆ' ಎಂದರು.