ಮಂಡ್ಯ,ಮಾ 07 (MSP): ಲೋಕಸಭಾ ಮಹಾ ಚುನಾವಣೆಯ ದಿನಾಂಕ ಹೊರಬೀಳಲು ಕ್ಷಣಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಕೆದರಿವೆ. ಇನ್ನೊಂದೆಡೆ ಲೋಕಸಭಾ ಚುನಾವಣೆ ಟಿಕೆಟ್ ಗಾಗಿ ಅಭ್ಯರ್ಥಿಗಳ ನಡುವೆ ಪೈಪೋಟಿ ಪ್ರಾರಂಭವಾಗಿದ್ದು ಇದು ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ.
'ಬಣ್ಣ'ದ ರಾಜಕೀಯಕ್ಕೆ ಹೆಸರುವಾಸಿಯಾಗಿರುವ ಸಕ್ಕರೆ ನಾಡು ಮಂಡ್ಯಕ್ಕಾಗಿ ಸುಮಲತಾ ಅಂಬರೀಷ್ ಮತ್ತು ನಿಖಿಲ್ ಕುಮಾರಸ್ವಾಮಿ ಹಿಡಿದಿರುವ ಹಠ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯ ಕ್ಷೇತ್ರದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಈಗಾಗಲೇ ನಿಖಿಲ್ ಕುಮಾರ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಕಾಂಗ್ರೆಸ್ ನ ಟಿಕೆಟ್ ಆಕಾಂಕ್ಷಿಯಾಗಿರುವ ಸುಮಲತಾ ಈಗಾಗಲೇ ಪ್ರಚಾರ ಕಾರ್ಯಕ್ಕಾಗಿ ಎಲ್ಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಮಂಡ್ಯವನ್ನು ದೋಸ್ತಿ ಪಕ್ಷಕ್ಕೆ ಬಿಟ್ಟುಕೊಟ್ಟಿರುವ ಕಾರಣ ಸುಮಲತಾ ಅವರಿಗೆ ಗ್ರೀನ್ ಸಿಗ್ನಲ್ ನೀಡಿಲ್ಲ. ಹೀಗಾಗಿ ಸುಮಲತಾ ಮಂಡ್ಯದಲ್ಲಿ ಪಕ್ಷೇತರರಾಗಿ ಅಥವಾ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಇದೆಲ್ಲದರ ನಡುವೆ ಪುಲ್ವಾಮ ಉಗ್ರದಾಳಿಯಲ್ಲಿ ಉಗ್ರರ ಬಾಂಬ್ ದಾಳಿಗೆ ಬಲಿಯಾದ ಸಿ.ಆರ್.ಪಿ.ಎಫ್. ಯೋಧ ಗುರು ಅವರ ಪತ್ನಿ ಕಲಾವತಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿಯೊಂದು ದಟ್ಟವಾಗಿ ಹರಿದಾಡುತ್ತಿದೆ. ಕಲಾವತಿಯವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ರೆ ಹಿಂದುಳಿದ ಮಡಿವಾಳ ಸಮುದಾಯ ಪ್ರಾಮುಖ್ಯತೆ ನೀಡಿದಂತಾಗುತ್ತದೆ ಹಾಗೂ ಅನುಕಂಪದ ಅಲೆ ಮತಗಳು ದೊರಕಬಹುದು ಎಂಬ ಲೆಕ್ಕಚಾರದೊಂದಿಗೆ ಹಿಂದುಳಿದ ವರ್ಗಗಳ ನಾಯಕ ದ್ವಾರಕಾನಾಥ್, ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದು ಅವರಿಗೆ ಟಿಕೆಟ್ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇಂತಹ ಹೈವೋಲ್ಟೇಜ್ ರಾಜಕಾರಣದ ನಡುವೆ ಪ್ರತಿಪಕ್ಷ ಬಿಜೆಪಿ ಮಾತ್ರ ತಮ್ಮ ನಡೆಯನ್ನು ಬಿಟ್ಟುಕೊಡದೆ ಕುತೂಹಲ ಮೂಡಿಸಿದೆ.