ಬೆಂಗಳೂರು,ಮಾ 07 (MSP): "ಹಣೆಯ ಮೇಲೆ ಉದ್ದ ನಾಮ ಇಡುವವರನ್ನು ಕಂಡರೆ ನನಗೆ ಭಯ, ತಿಲಕ ಇಟ್ಟುಕೊಳ್ಳೋರು ಬಿಜೆಪಿಯವರು" ಎಂದು ಹೇಳಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಟ್ವಿಟರ್ನಲ್ಲಿ ‘#SelfieWithTilak ಎಂಬ ಹ್ಯಾಶ್ಟ್ಯಾಗ್ ಬಳಸಿ ಅಭಿಯಾನ ಪ್ರಾರಂಭವಾಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ "ಹಣೆಯ ಮೇಲೆ ಉದ್ದ ನಾಮ ಇಡುವವರನ್ನು ಕಂಡರೆ ನನಗೆ ಭಯ"ಎಂದಿದ್ದರು. ಇದನ್ನು ಸಮರ್ಥಿಸಿ ತಮ್ಮ ಟ್ವಿಟ್ವರ್ ನಲ್ಲೂ ಟ್ವೀಟ್ ಮಾಡಿದ್ದರು. ಮಾತ್ರವಲ್ಲದೆ ಮಂಗಳೂರಿನಲ್ಲಿ ಕಾಂಗ್ರೆಸ್ ಪರಿವರ್ತನಾ ಸಮಾವೇಶದಲ್ಲೂ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದರು.
ಆದರೆ ಇದೀಗ ಈ ಹೇಳಿಕೆ ವಿರೋಧಿಸಿ ದೇಶದಾದ್ಯಂತ ಬುಧವಾರದಂದು ಒಂದೇ ದಿನದಲ್ಲಿ ಸಾವಿರಾರು ಜನರು ತಿಲಕ ಧರಿಸಿದ ಫೋಟೊ ಶೇರ್ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆ ಖಂಡಿಸಿ ಬುಧವಾರದಂದು ಟ್ವೀಟ್ ಮಾಡಿರುವ ಸಂಸದೆ ಶೋಭಾ ಕರಂದ್ಲಾಜೆ, ‘ತಿಲಕ ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕ. ಈ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ’ ಎಂದಿದ್ದಾರೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು, ಸಿದ್ದರಾಮಯ್ಯ ತಿಲಕ ಧರಿಸಿರೋ ಪೋಟೋ ಹಂಚಿಕೊಂಡು ಸಿದ್ದರಾಮಯ್ಯನರೇ ನೀವು ಹಿಂದೂಗಳನ್ನು ಇಷ್ಟೊಂದು ದ್ವೇಷಿಸುತ್ತಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ.
ಆದರೆ ಇದ್ಯಾವೂದಕ್ಕೂ ಜಗ್ಗದ ಸಿದ್ದರಾಮಯ್ಯ ತಿಲಕದ ಹೇಳಿಕೆ ಸಮರ್ಥಿಸಿಕೊಂಡು ಟ್ವಿಟ್ವರ್ ನಲ್ಲಿ ಟ್ವೀಟ್ ಮಾಡಿದ್ದಾರೆ.