ಕಲಬುರ್ಗಿ,ಮಾ 06(MSP): ಕರ್ನಾಟಕ ಸರ್ಕಾರ ರೈತರ ವಿರೋಧಿಯಾಗಿದೆ ಯಾಕೆಂದರೆ ದೇಶದ ಹಲವು ಭಾಗದಲ್ಲಿ ರೈತ ಸಮುದಾಯಕ್ಕೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಫಲ ದೊರೆತಿದ್ದರೆ, ರಾಜ್ಯದ ಅರ್ಹ ಫಲಾನುಭವಿ ರೈತರ ಪಟ್ಟಿ ಇನ್ನೂ ಕೇಂದ್ರದ ಕೈ ಸೇರಿಲ್ಲ. ರೈತರ ಯೋಜನೆಗಳಿಗೆ ರಾಜ್ಯ ಸರ್ಕಾರ ಅಡ್ಡಗೋಡೆಯಾಗಿದ್ದು, ಇದು ರೈತರ ವಿರೋಧಿ ಸರ್ಕಾರವಾಗಿದೆ ಎಂದು ಪ್ರಧಾನಿ ಮೋದಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಕಲಬುರ್ಗಿಯಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ, ಲೋಕಾರ್ಪಣೆಗೊಳಿಸಿದ ನಂತರ ಬೃಹತ್ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ , ಹಲವು ರಾಜ್ಯಗಳ ರೈತರ ಬ್ಯಾಂಕ್ ಖಾತೆಗಳಿಗೆ ಈಗಾಗಲೇ ನೇರವಾಗಿ ಕಿಸಾನ್ ಸಮ್ಮಾನ್ ಯೋಜನೆಯ ಹಣ ತಲುಪಿದೆ. ಆದರೆ ಕರ್ನಾಟಕದ ರೈತರಿಗೆ ಇನ್ನೂ ಸಿಕ್ಕಿಲ್ಲ. ರಾಜ್ಯದಲ್ಲಿ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ ಹಾಗೂ ಅಧಿಕಾರ ದುರಾಸೆ ಹೊಂದಿರುವ ಕಾಂಗ್ರೆಸ್ ಇದಕ್ಕೆಲ್ಲ ಕಾರಣ. ಸಂಪೂರ್ಣ ಸಾಲ ಮನ್ನಾ ಭರವಸೆ ನೀಡಿದ ಸರ್ಕಾರ ಅದನ್ನೂ ಮಾಡಿಲ್ಲ ಎಂದು ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹೆಚ್ಚಿನ ಯೋಜನೆಗಳ ಹಣವು ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಜಮೆಯಾಗುವುದರಿಂದ 5 ರೂಪಾಯಿ ಕೂಡಾ ಎಗರಿಸಿ ಭ್ರಷ್ಟಾಚಾರ ಮಾಡಲು ಆಗುವುದಿಲ್ಲವಲ್ಲಾ ಎಂಬ ಚಿಂತೆ ಕಾಂಗ್ರೆಸ್ ಹಾಗೂ ಮಹಾಘಟಬಂಧನ್’ನ ಪಕ್ಷಗಳಿದ್ದು. ಹೀಗಾಗಿ ಕಳ್ಳರ ಅಂಗಡಿ ಬಂದ್ ಆಗಿದ್ದು, ಇವರೆಲ್ಲರೂ ನನ್ನನ್ನು ವಿರೋಧಿಸಲು ಇದೇ ಪ್ರಮುಖ ಕಾರಣ ಎಂದು ವ್ಯಂಗ್ಯವಾಡಿದರು.
ಈ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಸಹ ಉಸ್ತುವಾರಿ ಶ್ರೀಮತಿ ಪುರಂದರೇಶ್ವರಿ, ಚುನಾವಣಾ ಸಹ ಉಸ್ತುವಾರಿ ಶ್ರೀಮತಿ ಕಿರಣ್ ಮಹೇಶ್ವರಿ, ಮಾಜಿ ಉಪಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಂಸದರಾದ ಭಗವಂತ ಖೂಬ, ಶಾಸಕರಾದ ಉಮೇಶ್ ಜಾಧವ್, ಪ್ರಭು ಚವ್ಹಾಣ್, ರಾಜು ಗೌಡ, ದತ್ತಾತ್ರೇಯ ಪಾಟೀಲ ರೇವೂರ, ಮಾಜಿ ಮಂತ್ರಿಗಳಾದ ಮಾಲೀಕಯ್ಯ ಗುತ್ತೇದಾರ್, ಬಾಬೂರಾವ್ ಚವ್ಹಾಣ್, ಬಾಬೂರಾವ್ ಚಿಂಚನಸೂರ್ ,ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷರಾದ ಭಾರತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.