ಬೆಂಗಳೂರು, ಡಿ 16( DaijiworldNews/MS): ರಾಜ್ಯದಲ್ಲಿ ಮತ್ತೆ ವಿದ್ಯುತ ದರ ಏರಿಕೆ ಮೂಲಕ ಗ್ರಾಹಕರಿಗೆ ಶಾಕ್ ನೀಡಲು ವಿದ್ಯುತ್ ಸರಬರಾಜು ಕಂಪೆನಿಗಳು ಮುಂದಾಗಿದ್ದು, ಯೂನಿಟ್ಗೆ 1.20ರಿಂದ 1.40 ರೂ. ಹೆಚ್ಚಳಕ್ಕೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಪ್ರಸ್ತಾವನೆ ಸಲ್ಲಿಸಿವೆ.
ಖರೀದಿ, ಸೋರಿಕೆ, ಸಬ್ಸಿಡಿ ಸೇರಿ ವಿವಿಧ ವೆಚ್ಚ ಆಧರಿಸಿ ದರ ಹೆಚ್ಚಳಕ್ಕೆ ಮನವಿ ಮಾಡಿವೆ. ಇದರೊಂದಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಸೇರಿದಂತೆ ಎಸ್ಕಾಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಪಿಂಚಣಿ ಮತ್ತು ಈ ನೌಕರರ ವೇತನ ಪರಿಷ್ಕರಣೆಯ ಬಾಬ್ತು ಕೂಡ ಪ್ರಸ್ತಾವನೆಯಲ್ಲಿ ಸೇರ್ಪಡೆಯಾಗಿದೆ.
ಕಳೆದ ಬಾರಿ ಎಸ್ಕಾಂ 1.85 ರೂ. ಹೆಚ್ಚಳಕ್ಕೆ ಪ್ರಸ್ತಾಪ ಮಾಡಿದ್ದವು. ದರ ಪರಿಷ್ಕರಣೆಯಾಗುವ ವೇಳೆಗೆ ಚುನಾವಣೆ ಘೋಷಣೆಯಾದರೆ ಸ್ವಲ್ಪ ಮಟ್ಟಿಗೆ ರಿಲೀಫ್ ಸಿಗಲಿದ್ದು, ಬಳಿಕ ಪೂರ್ವಾನ್ವಯವಾಗುವಂತೆ ದರ ಜಾರಿಯಾಗಲಿದೆ.
ಈ ಹಿಂದೆ ತೀವ್ರ ವಿರೋಧದ ನಡುವೆಯೂ ಅ. 1ರಿಂದಷ್ಟೇ ಇಂಧನ ಹೊಂದಾಣಿಕೆ ಶುಲ್ಕದಡಿ ದರ ಯೂನಿಟ್ಗೆ ಗರಿಷ್ಠ 43 ಪೈಸೆಯಿಂದ ಕನಿಷ್ಠ 24 ಪೈಸೆಯಷ್ಟು ಹೆಚ್ಚಳ ಮಾಡಲಾಗಿತ್ತು.