ಮೇಘಾಲಯ, ಡಿ 15 (DaijiworldNews/DB): ಮಗಳೊಬ್ಬಳು 50 ವರ್ಷದ ತನ್ನ ತಾಯಿಗೆ ಮರು ಮದುವೆ ಮಾಡಿಸಿದ ಅಪರೂಪದ ಪ್ರಸಂಗ ಮೇಘಾಲಯದಲ್ಲಿ ನಡೆದಿದೆ. ಮದುವೆ ನಡೆದ ಕೆಲ ತಿಂಗಳ ಬಳಿಕ ಮಗಳು ತಾಯಿಯ ಮದುವೆಯ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.
ಮೇಘಾಲಯದ ಶಿಲ್ಲಾಂಗ್ ನಲ್ಲಿ ಈ ವಿಶಿಷ್ಟ ಮದುವೆ ನಡೆದಿದ್ದು, ತಾಯಿ ಮೌಶುಮಿ ಚಕ್ರವರ್ತಿಗೆ ಮಗಳು ದೇಬ್ ಅರ್ತಿ ರಿಯಾ ಚಕ್ರವರ್ತಿ ಎಂಬಾಕೆ ವಿವಾಹ ಮಾಡಿಸಿದ್ದಾಳೆ.ಪಶ್ಚಿಮ ಬಂಗಾಳದ ಸ್ವಪನ್ ಎಂಬವರೊಂದಿಗೆ ಮೌಶುಮಿ ವಿವಾಹ ನಡೆದಿದೆ.
ದೇಬ್ ಗೆ ಎರಡು ವರ್ಷವಾಗಿದ್ದಾಗ ವೈದ್ಯರಾಗಿದ್ದ ಆಕೆಯ ತಂದೆ ಮೆದುಳಿನ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದರು. ಆಗ ಶಿಕ್ಷಕಿಯಾಗಿದ್ದ ಮೌಶುಮಿಗೆ ಕೇವಲ 25 ವರ್ಷ. ಪ್ರಸ್ತುತ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ದೇಬ್ ತಾಯಿಯ ಸಂಪೂರ್ಣ ಜವಾಬ್ದಾರಿಯಲ್ಲಿ ಬೆಳೆದರು. ಎಳೆ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡ ತಾಯಿಗೆ ಮರು ಮದುವೆ ಮಾಡಿಸಿ ಆಕೆಯ ಜೀವನದಲ್ಲಿ ಖುಷಿ ತುಂಬಬೇಕೆಂಬುದು ದೇಬ್ ಇಚ್ಚೆಯಾಗಿತ್ತು.ಆದರೆ ಆಕೆಯ ಈ ಯೋಚನೆಗೆ ತಾಯಿ ಅಂಕಿತ ಹಾಕಿರಲಿಲ್ಲ. ತಾನು ಮರು ಮದುವೆಯಾದರೆ ತನ್ನ ಮಗಳ ಮದುವೆಗೆ ತೊಡಕಾಗಬಹುದು ಎಂದೇ ಆಕೆ ಯೋಚಿಸಿದ್ದಳು. ಆದರೆ ಛಲ ಬಿಡದ ಮಗಳು ದೇಬ್ ಕಳೆದ ಮಾರ್ಚ್ ನಲ್ಲಿ ತಾಯಿಗೆ ವಿವಾಹ ಮಾಡಿಸಿದ್ದಳು. ಇದೀಗ ಆಕೆ ತಾಯಿಗೆ ಮದುವೆ ಮಾಡಿಸಿರುವ ಫೋಟೋ/ವೀಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.