ಸರನ್ (ಬಿಹಾರ), ಡಿ 14 (DaijiworldNews/DB): ನಕಲಿ ಮದ್ಯ ಸೇವಿಸಿ ಐವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಬಿಹಾರ ವಿಧಾನಸಭೆಯಲ್ಲಿ ಬುಧವಾರ ಗದ್ದಲವುಂಟಾಯಿತು. ಈ ವೇಳೆ ತಾಳ್ಮೆ ಕಳೆದುಕೊಂಡ ಸಿಎಂ ನಿತೀಶ್ಕುಮಾರ್ ಅವರು ಬಿಜೆಪಿ ಶಾಸಕರೊಬ್ಬರಿಗೆ ನೀನು ಕುಡುಕ ಎಂದು ರೇಗಾಡಿದ ಪ್ರಸಂಗ ನಡೆಯಿತು.
ಬಿಹಾರದ ಸರನ್ ಜಿಲ್ಲೆಯ ಛಪ್ರಾ ಪ್ರದೇಶದಲ್ಲಿ ನಕಲಿ ಮದ್ಯ ಸೇವಿಸಿ ಐವರು ಇತ್ತೀಚೆಗೆ ಮೃತಪಟ್ಟಿದ್ದರು. ಈ ವಿಚಾರ ಬಿಹಾರ ವಿಧಾನಸಭೆಯಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು. ಬಿಜೆಪಿ ನಾಯಕರು ನಿತೀಶ್ಕುಮಾರ್ ಸರ್ಕಾರದ ವಿರುದ್ದ ಹರಿಹಾಯ್ದು ಸದನದ ಬಾವಿಗಿಳಿದು ಪ್ರತಿಭಟಿಸಿದರು.
ಈ ವೇಳೆ ವಿಪಕ್ಷ ನಾಯಕ ವಿಜಯ್ಕುಮಾರ್ ಸಿನ್ಹಾ ಅವರು 2016ರ ಮದ್ಯ ನಿಷೇಧ ನೀತಿ ಕುರಿತು ಪ್ರಸ್ತಾಪಿಸಿ, ನಿತೀಶ್ಕುಮಾರ್ ಸರ್ಕಾರ ಈ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಕ್ಕೆ ವಿಫಲವಾಗಿದೆ ಎಂದು ಟೀಕಿಸಿದರು. ಈ ವೇಳೆ ತಾಳ್ಮೆ ಕಳೆದುಕೊಂಡು ನಿತೀಶ್ಕುಮಾರ್, ವಿಜಯ್ಕುಮಾರ್ ಸಿನ್ಹಾ ಅವರಿಗೆ ನೀನು ಕುಡುಕ ಎಂದು ಜರೆದ ಪ್ರಸಂಗ ನಡೆಯಿತು.