ಬೆಂಗಳೂರು, ಡಿ 13 ( DaijiworldNews/MS): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೌಢ್ಯಕ್ಕೆ ಸೆಡ್ಡು ಹೊಡೆದು ಗಡಿ ಜಿಲ್ಲೆ ಚಾಮರಾಜನಗರಕ್ಕೆ ಭೇಟಿ ನೀಡಿದ್ದಾರೆ. ಈ ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಅಪವಾದ ಇದೆ. ಇದರ ಬೆನ್ನಲ್ಲೇ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಇಂದು ಜಿಲ್ಲೆಗೆ ತೆರಳಿದ್ದಾರೆ .
ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಸಿಎಂ "ಚಾಮರಾಜನಗರ ಜಿಲ್ಲೆಯೂ ಕೂಡ 31 ಜಿಲ್ಲೆಗಳ ಪೈಕಿ ಮಹತ್ವದ ಜಿಲ್ಲೆ. ನಿಸರ್ಗಭರಿತ, ಐತಿಹಾಸಿಕ ಗಡಿ ಜಿಲ್ಲೆಯಾಗಿದೆ. ಅಭಿವೃದ್ಧಿಗೆ ಮಹತ್ವ ಕೊಟ್ಟೇ ಕೊಡುತ್ತೇವೆ. ನಾನು ಮುಖ್ಯಮಂತ್ರಿಯಾದ ನಂತರ ಮೂರನೇ ಬಾರಿಗೆ ಜಿಲ್ಲೆ ಭೇಟಿ ನೀಡುತ್ತಿದ್ದೇನೆ" ಎಂದು ಹೇಳಿದ್ದಾರೆ.
ಗಡಿವಿವಾದದ ಬಗ್ಗೆ ಚರ್ಚೆ:
"ಕೇಂದ್ರ ಗೃಹ ಸಚಿವರು ಗಡಿವಿವಾದ ದ ಬಗ್ಗೆ ಚರ್ಚಿಸಲೆಂದೇ ಎರಡೂ ರಾಜ್ಯ ಗಳ ಮುಖ್ಯಮಂತ್ರಿಗಳನ್ನು ದೆಹಲಿಗೆ ಕರೆದಿದ್ದಾರೆ. ಅಲ್ಲಿ ನಮ್ಮನಿಲುವಿನ ಬಗ್ಗೆ ಹೇಳುತ್ತೇವೆ. ಈಗಾಗಲೇ ರಾಜ್ಯ ಪುನರ್ ವಿಂಗಡನಾ ಕಾಯ್ದೆ, ಪ್ರಕ್ರಿಯೆ, ಸುಪ್ರೀಂ ಕೋರ್ಟ್ ಪ್ರಕರಣ ಸೇರಿದಂತೆ ಎಲ್ಲಾ ಮಾಹಿತಿಯನ್ನು ಗೃಹ ಸಚಿವರಿಗೆ ನೀಡಲಿದ್ದೇನೆ. ಸಂವಿಧಾನದಲ್ಲಿನ ಅವಕಾಶಗಳು ಮತ್ತು 2004 ರ ಪ್ರಕರಣ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡೇ ಇಲ್ಲ ಎಂಬ ಬಗ್ಗೆ ಗೃಹ ಕಾರ್ಯದರ್ಶಿಗಳಿಗೆ ಮನವಿ ಮಾಡಿಕೊಡಲಿದ್ದೇನೆ" ಎಂದಿದ್ದಾರೆ
ಮಾಂಡೋಸ್ ಚಂಡಮಾರುತ: ಬೆಳೆ ಹಾನಿ ಸಮೀಕ್ಷೆ:
"ಮಾಂಡೋಸ್ ಚಂಡ ಮಾರುತದಿಂದ ಕೆಲವು ತೊಂದರೆಗಳಗಿದ್ದು, ವಿಶೇಷವಾಗಿ ಬೆಳೆಗಳ ಮೇಲೆ ಆಗಿರುವ ಪ್ರಭಾವ ಏನೆಂದು ಸಮೀಕ್ಷೆ ಮಾಡಲಾಗುತ್ತಿದೆ. ರಾಗಿ, ಬೆಳೆದು ನಿಂತಿದೆ. ಕಾಟಾವು ಮಾಡಿದವರಿಗೆ ಕಷ್ಟವಾಗುತ್ತಿದೆ ಎಂಬ ವರದಿ ಬಂದಿದೆ. ಕೃಷಿ ಇಲಾಖೆಯಿಂದ ಸಂಪೂರ್ಣ ಮಾಹಿತಿ ತರಿಸಿಕೊಳ್ಳಲಾಗುತ್ತಿದೆ" ಎಂದಿದ್ದಾರೆ
ಸಚಿವ ಸಂಪುಟ ವಿಸ್ತರಣೆ:
"ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಗೆ ಹೋಗುತ್ತಿದ್ದೇವೆ. ಅನಂತರ ಈ ಬಗ್ಗೆ ಚರ್ಚೆಯಾದರೆ, ಸಿದ್ಧತೆ ಮಾಡಿಕೊಂಡು ಹೋಗಿರುತ್ತೇನೆ" ಎಂದಿದ್ದಾರೆ