ಬೆಂಗಳೂರು, ಮಾ 05(MSP): 'ಗಾಂಧೀಜಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ಪರ ಮಾತನಾಡುವವರು ದೇಶದಲ್ಲಿ ಇದ್ದಾರೆ. ಇವರಿಗೆ ನಿಜವಾದ ತಾಕತ್ ಇದ್ದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುಂಡಿಟ್ಟು ಸಾಯಿಸಲಿ' ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೇಳೂರು ಗೋಪಾಲಕೃಷ್ಣ ಹೇಳಿದ ವಿವಾದಾತ್ಮಕ ಮಾತುಗಳನ್ನು ಬಿಜೆಪಿ ಪಕ್ಷ ಟ್ವಿಟರ್ ನಲ್ಲಿ ಖಾತೆಯಲ್ಲಿ ಪ್ರಕಟಿಸಿದ್ದು ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಬಿಜೆಪಿ ಒತ್ತಾಯಿಸಿದೆ. ಪ್ರಧಾನಿ ಮೋದಿಯವರನ್ನು ಹತ್ಯೆ ಮಾಡುವಂತೆ ಕಾಂಗ್ರೆಸ್ ನಾಯಕರು ಪ್ರಚೋದಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಶಾಸಕ ಬೇಳೂರು ಗೋಪಾಲಕೃಷ್ಣ ಮಾ.4 ರಂದು ನಡೆದ ಕಾಂಗ್ರೆಸ್ ಕಾರ್ಯಕರ್ತರ ಅಧಿಕೃತ ಸಭೆಯಲ್ಲಿ ಈ ಹೇಳಿಕೆ ನೀಡಿದ್ದರು.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ತಮ್ಮ ಪಕ್ಷದ ಅಧಿಕೃತ ಸಭೆಯಲ್ಲಿ ದೇಶದ ಪ್ರಜೆಗಳ ಆಯ್ಕೆಯಾದ ದೇಶದ ಪ್ರಧಾನಿಯನ್ನು ಕೊಲೆ ಮಾಡುವಂತೆ ಕರೆ ನೀಡಿದ್ದಾರೆ. ದೇಶದ ಪ್ರಧಾನಿಯ ಹತ್ಯೆಗೆ ಕರೆ ನೀಡಿರುವ ಕಾಂಗ್ರೆಸ್ ಶಾಸಕ ಬೇಳೂರು ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹಸಚಿವರು ಹಾಗೂ ರಾಜ್ಯ ಪೊಲೀಸ್ ಇಲಾಖೆಯನ್ನು ಆಗ್ರಹಿಸುತ್ತಿದ್ದೇವೆʼ ಎಂದು ಟ್ವೀಟ್ ಮಾಡಿದೆ. ಮಾತ್ರವಲ್ಲದೆ ಈ ಟ್ವೀಟ್ ನ್ನು ನಗರ ಪೊಲೀಸ್ ಆಯುಕ್ತರು, ಕೇಂದ್ರ ಗೃಹ ಇಲಾಖೆಗೆ ಟ್ಯಾಗ್ ಮಾಡಲಾಗಿದೆ.
ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಶಾಸಕ ನಾನು ಆ ರೀತಿ ಹೇಳಿಕೆ ಕೊಟ್ಟೇ ಇಲ್ಲ ಎಂದು ಸಮಜಾಯಿಸಿ ನೀಡಿದ್ದಾರೆ.