ಬೆಳಗಾವಿ,ಮಾ.04(AZM):ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರ ಫೇಸ್ಬುಕ್ ನಲ್ಲಿ ದೇಶ ವಿರೋಧಿ ಪೋಸ್ಟ್ ಅನ್ನು ಹಾಕಿದ ಪ್ರಕರಣದ ಹಿನ್ನಲೆ ಭಾರೀ ವಿವಾದ ಸೃಷ್ಟಿಯಾಗಿದ್ದು, ಇದೀಗ ನೈಜ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಂಗ್ರೆಸ್ ಮಾಜಿ ಶಾಸಕ ಅಶೋಕ್ ಪಟ್ಟಣರವರ ಆಪ್ತ ಮುಹಮ್ಮದ್ ಶಫಿ ಎಂಬವರ ಫೇಸ್ಬುಕ್ ಖಾತೆಯಲ್ಲಿ ಇತ್ತೀಚೆಗೆ 'ಜೈ ಪಾಕಿಸ್ತಾನ್, ಜೈ ಅಶೋಕ ಅಣ್ಣಾ' ಎಂಬ ಪೋಸ್ಟ್ ಹಾಕಲಾಗಿದ್ದು, ಶಫಿ ಎಂಬವರ ವಿರುದ್ಧ ಜಿಲ್ಲೆಯಾದ್ಯಂತ ಭಾರೀ ಪ್ರತಿಭಟನೆ ಹಾಗೂ ಧರಣಿ ನಡೆದಿತ್ತು. ಆದರೆ ಪೊಲೀಸರ ತನಿಖೆಯಿಂದ ನೈಜ್ಯ ಆರೋಪಿ ಹೊರಬಿದ್ದಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಾಗರಾಜನನ್ನು ರಾಮದುರ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಗರಾಜ್ ವಿರುದ್ಧ ಕಲಂ 124ಎ, 153ಎ, 153ಬಿ ಹಾಗೂ ಐಟಿ ಆಕ್ಟ್ 66ಸಿ, 66 ಬಿ ಅಡಿ ಪ್ರಕರಣ ದಾಖಲಾಗಿದೆ.
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಶಫಿಯವರ ಫೇಸ್ಬುಕ್ ಅಕೌಂಟ್ ನಲ್ಲಿ ನಾಗರಾಜ್ ದೇಶವಿರೋಧಿ ಪೋಸ್ಟ್ ಮಾಡಿದ್ದ ಎನ್ನಲಾಗುತ್ತಿದೆ. ಹಲವು ವರ್ಷಗಳಿಂದ ರಾಮದುರ್ಗದಲ್ಲಿ ಕಂಪ್ಯೂಟರ್ ಸೆಂಟರ್ ನಡೆಸುತ್ತಿದ್ದ ನಾಗರಾಜ್ ಹಾಗೂ ಶಫಿ ನಡುವೆ ಉತ್ತಮ ಸಂಬಂಧವಿತ್ತು. ಶಫಿಯವರ ಫೇಸ್ಬುಕ್ ಖಾತೆಯ ಐಡಿ ಹಾಗೂ ಪಾಸ್ ವರ್ಡ್ ನಾಗರಾಜನಿಗೆ ತಿಳಿದಿತ್ತು.
ವೈಯಕ್ತಿಕ ದ್ವೇಷದ ಕಾರಣ ಈ ಅವಕಾಶವನ್ನು ಬಳಸಿಕೊಂಡ ನಾಗರಾಜ ಶಫಿ ಹೆಸರಿಗೆ ಕಪ್ಪು ಮಸಿ ಬಳಿಯಲು ವಿವಾದಾತ್ಮಕ ಪೋಸ್ಟ್ ಹಾಕಿದ್ದ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಪೋಸ್ಟ್ ಹಾಕಿದವರ ಮೇಲೂ ಕ್ರಮ ಜರುಗಿಸುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಧೀರ್ ಕುಮಾರ್ ತಿಳಿಸಿದ್ದಾರೆ.