ಹೊಸದಿಲ್ಲಿ,ಮಾ.03(AZM):ಒನ್ ರ್ಯಾಂಕ್ ಒನ್ ಪೆನ್ಶನ್ (ಒಆರ್ಒಪಿ) ಗೆ ಆಗ್ರಹಿಸಿ ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ ನಿವೃತ್ತ ಸಿಆರ್ಪಿಎಫ್ ಯೋಧರು ಭಾನುವಾರ ದಿಲ್ಲಿಯ ಜಂತರ್ ಮಂತರ್ ಮೈದಾನದಲ್ಲಿ ಕೇಂದ್ರ ಸರಕಾರದ ವಿರುದ್ಧ ಧರಣಿ ನಡೆಸಿದ್ದಾರೆ.
ಸಿಆರ್ ಪಿ ಎಫ್ ಯೋಧರಿಗೆ ತಮ್ಮ ಸಾವಿನ ನಂತರ ಕುಟುಂಬ ಸದಸ್ಯರಿಗೆ ಆತ ಸೇನೆಯಲ್ಲಿ ಸೇವೆ ಸಲ್ಲಿಸಬಹುದಾಗಿದ್ದ ಸಮಯದವರೆಗಿನ ವೇತನವಾಗಲಿ ಅದರ ಬಳಿಕ ಆತನ ಪಿಂಚಣಿ ಕುಟುಂಬ ಸದಸ್ಯರಿಗೆ ಸಿಗುವುದಿಲ್ಲ. ಈ ಹಿನ್ನಲೆ ನಿವೃತ್ತ ಯೋಧರು ಒಆರ್ ಒ ಪಿಗೆ ಆಗ್ರಹಿಸಿ ಧರಣಿ ನಡೆಸಿದ್ದಾರೆ.
ಸೇನೆಯ ಸಿಬ್ಬಂದಿಯೊಬ್ಬ ಸಾವನ್ನಪ್ಪಿದರೆ ಆತ ಸೇನೆಯಲ್ಲಿ ಸೇವೆ ಸಲ್ಲಿಸಬಹುದಾಗಿದ್ದ ಸಮಯದವರೆಗಿನ ವೇತನ ಮತ್ತು ನಂತರ ಆತನ ಪಿಂಚಣಿ ಕುಟುಂಬ ಸದಸ್ಯರಿಗೆ ಸಿಗುತ್ತದೆ. ಆದರೆ ಸಿಆರ್ಪಿಎಫ್ ಯೋಧರಿಗೆ ಆ ಸೌಲಭ್ಯವಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ 65ರ ಹರೆಯದ ಮುಹಮ್ಮದ್ ಶೇರ್ ಖೇದ ವ್ಯಕ್ತಪಡಿಸಿದ್ದಾರೆ.ಪಿಂಚಣಿ ಸೌಲಭ್ಯದ ಜೊತೆಗೆ ನಮಗೆ ಹುತಾತ್ಮ ಸ್ಥಾನಮಾನವನ್ನೂ ನೀಡಬೇಕು ಎಂದು ಮುಹಮ್ಮದ್ ಶೇರ್ ಆಗ್ರಹಿಸಿದ್ದಾರೆ. ಶೇರ್ ಸಿಆರ್ ಪಿಎಫ್ ನಲ್ಲಿ ಪೇದೆಯಾಗಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಎಂದು ಎನ್ ಡಿಟಿವಿ ವರದಿ ಮಾಡಿದೆ.
. ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಗಾಯಗೊಂಡಿದ್ದ ಸಿಆರ್ಪಿಎಫ್ ಯೋಧ ರವಿವಾರ ಮೃತಪಟ್ಟಿದ್ದಾರೆ. ಪೂಂಛ್ ಜಿಲ್ಲೆಯ ಬಳಿ ನಿಯಂತ್ರಣ ರೇಖೆಯಲ್ಲಿ ನಡೆದ ಶೆಲ್ ದಾಳಿಯಲ್ಲಿ ಶನಿವಾರ ಇಬ್ಬರು ಸಿಆರ್ಪಿಎಫ್ ಯೋಧರು ಬಲಿಯಾಗಿದ್ದರು. ನಾವು ನಮ್ಮ ಕುಟುಂಬ, ಹೆತ್ತವರು, ಕೆಲಸ ಕಾರ್ಯಗಳನ್ನು ತೊರೆದು ಬರುತ್ತೇವೆ. ಹಿಂದಿನ ಹಾಗೂ ಹಾಲಿ ಸರಕಾರ ನಮ್ಮ ಜೊತೆ ನಡೆದುಕೊಳ್ಳುತ್ತಿರುವ ರೀತಿ ಸರಿಯಿಲ್ಲ ಎಂದು 24 ವರ್ಷ ಸಿಆರ್ಪಿಎಫ್ನಲ್ಲಿ ಮುಖ್ಯ ಪೇದೆಯಾಗಿ ಸೇವೆ ಸಲ್ಲಿಸಿರುವ ಕೇರಳದ 65 ವರ್ಷದ ಜಾರ್ಜ್ ಸಿ.ವಿ ವಿಷಾದ ವ್ಯಕ್ತಪಡಿಸಿದ್ದಾರೆ.