ನವದೆಹಲಿ, ಡಿ 09 (DaijiworldNews/DB): ವಯಸ್ಕರ ಅಂಶವಿರುವ ಜಾಹೀರಾತನ್ನು ಯೂಟ್ಯೂಬ್ನಲ್ಲಿ ಪ್ರಕಟಿಸಿದ್ದಕ್ಕೆ ಗೂಗಲ್ ಇಂಡಿಯಾದಿಂದ 75 ಲಕ್ಷ ರೂ. ಪರಿಹಾರ ಕೇಳಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಸುಪ್ರೀಂ ಕೋರ್ಟ್ 25 ಸಾವಿರ ರೂ. ದಂಡ ವಿಧಿಸಿದೆ.
ಯೂಟ್ಯೂಬ್ನಲ್ಲಿ ವಯಸ್ಕರ ಅಂಶವಿರುವ ಜಾಹೀರಾತು ಪ್ರಕಟಿಸಿರುವುದರಿಂದ ನನ್ನ ಗಮನ ಬೇರೆಡೆ ಹೋಗಿದೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವುದಕ್ಕೆ ನನ್ನಿಂದ ಸಾಧ್ಯವಾಗಿಲ್ಲ. ಹೀಗಾಗಿ ನನಗೆ ಗೂಗಲ್ ಇಂಡಿಯಾ 75 ಲಕ್ಷ ರೂ. ಪರಿಹಾರ ನೀಡಬೇಕೆಂದು ಮಧ್ಯಪ್ರದೇಶದ ನಿವಾಸಿಯೊಬ್ಬರು ಅರ್ಜಿ ಸಲ್ಲಿಸಿದ್ದರು.
ಜಾಹೀರಾತುಗಳನ್ನು ನೋಡುವುದು, ನೋಡದಿರುವುದು ನಿಮ್ಮ ಆಯ್ಕೆ. ಹೀಗಾಗಿ ಇಷ್ಟವಾಗದಿದ್ದಲ್ಲಿ ನೋಡಬೇಡಿ. ನೋಡಬೇಕೆಂದು ಯಾರೂ ಬಲವಂತ ಮಾಡುವುದಿಲ್ಲ ಎಂದು ನ್ಯಾಯಪೀಠ ಹೇಳಿತು. ಇಂತಹ ಅರ್ಜಿಗಳು ನ್ಯಾಯಾಂಗದ ಸಮಯ ವ್ಯರ್ಥ ಮಾಡುವಲ್ಲಿ ಕಾರಣವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಪ್ರಾರಂಭದಲ್ಲಿ ವ್ಯಕ್ತಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಬಳಿಕ 25,000 ರೂ.ಗಳಿಗೆ ಇಳಿಕೆ ಮಾಡಿತು.