ನವದೆಹಲಿ, ಡಿ 9 (DaijiworldNews/HR): ದೆಹಲಿಯ ಮಹಿಳಾ ಆಯೋಗದ ವಿವಿಧ ಸ್ಥಾನಗಳಿಗೆ ಆಪ್ ಕಾರ್ಯಕರ್ತರನ್ನು ನೇಮಿಸಿರುವ ಆರೋಪ ಎದುರಿಸುತ್ತಿರುವ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಮತ್ತಿತರ ವಿರುದ್ಧ ಭ್ರಷ್ಟಾಚಾರ ಮತ್ತು ಪಿತೂರಿ ಪ್ರಕರಣಗಳನ್ನು ದಾಖಲಿಸಿಕೊಳ್ಳುವಂತೆ ದೆಹಲಿ ಕೋರ್ಟ್ ಪೊಲೀಸರಿಗೆ ಸೂಚಿಸಿರುವುದಾಗಿ ವರದಿಯಾಗಿದೆ.
ಈ ಕುರಿತು ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ದಿಗ್ ವಿನಯ್ ಸಿಂಗ್, ದೆಹಲಿ ಮಹಿಳಾ ಆಯೋಗದಿಂದ ಹಲವು ದಿನಾಂಕಗಳಂದು ನಡೆದಿರುವ ಸಭೆಗಳಲ್ಲಿ ಕೈಗೊಂಡಿರುವ ನಿರ್ಣಯಗಳಿಗೆ ಆರೋಪಿಗಳು ಸಹಿ ಮಾಡಿದ್ದು, ಪ್ರಶ್ನೆಗೊಳಗಾಗಿದ್ದ ನೇಮಕಾತಿಗಳನ್ನು ಎಲ್ಲ ನಾಲ್ವರೂ ಪರಸ್ಪರ ಒಪ್ಪಂದದ ಮೂಲಕ ನಡೆಸಿರುವ ಅನುಮಾನಕ್ಕೆ ಕಾರಣವಾಗಿದ್ದು, ಇದು ಮೇಲ್ನೋಟದ ಅಪರಾಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ದೆಹಲಿ ಮಹಿಳಾ ಆಯೋಗದ ಮಾಜಿ ಸದಸ್ಯರಾದ ಪ್ರೊಮಿಳಾ ಗುಪ್ತಾ, ಸಾರಿಕಾ ಚೌಧರಿ ಮತ್ತು ಫರ್ಹೀನ್ ಮಲಿಕ್ ಅವರನ್ನು ವಿಚಾರಣೆಗೊಳಪಡಿಸುವಂತೆಯೂ ನಿರ್ದೇಶಿಸಿದೆ.