ನವದೆಹಲಿ, ಡಿ 09 (DaijiworldNews/DB): ನೆಟ್ಫ್ಲಿಕ್ಸ್ನ 'ಇಂಡಿಯನ್ ಮ್ಯಾಚ್ಮೇಕಿಂಗ್’ ಪ್ರಸಿದ್ದ ಶೋದಲ್ಲಿ ಕಾಣಿಸಿಕೊಂಡ ಭಾರತ ಮೂಲದ ಟೆಕ್ಕಿಯೊಬ್ಬರನ್ನು ಫೇಸ್ಬುಕ್ನ ಮಾತೃಸಂಸ್ಥೆ ಮೆಟಾದಿಂದ ವಜಾಗೊಳಿಸಲಾಗಿದೆ.
ಭಾರತ ಮೂಲದ ಎಂಜಿನಿಯರ್ ಸುರ್ಭಿ ಗುಪ್ತಾ ಅವರೇ ವಜಾಗೊಂಡವರು. 2009ರಿಂದ ಯುನೈಟೆಡ್ ಸ್ಟೇಟ್ಸ್ನಲ್ಲಿ ವಾಸಿಸುತ್ತಿದ್ದು, ಮೆಟಾದಲ್ಲಿ ಉತ್ಪನ್ನ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು. ಪ್ರಾಮಾಣಿಕ ಕೆಲಸಗಾರ್ತಿಯಾಗಿದ್ದ ಗುಪ್ತಾರನ್ನು ಮೆಟಾ ಇತ್ತೀಚೆಗೆ ಕೆಲಸದಿಂದ ವಜಾಗೊಳಿಸಿದೆ.
ಮೆಟಾವು ಇತ್ತೀಚೆಗೆ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದು, ಈ ಪೈಕಿ ಗುಪ್ತಾ ಅವರೂ ಒಬ್ಬರು. 2018ರಲ್ಲಿ ಮಿಸ್ ಭಾರತ್-ಕ್ಯಾಲಿಫೋರ್ನಿಯಾ ಸ್ಪರ್ಧೆ ಗೆದ್ದಿದ್ದ ಗುಪ್ತಾ, ಮುಂಬೈ ಮೂಲದ ಮ್ಯಾಚ್ಮೇಕರ್ ಸಿಮಾ ತಪಾರಿಯಾ ಅವರು ಆಯೋಜಿಸಿದ ಜನಪ್ರಿಯ ನೆಟ್ಫ್ಲಿಕ್ಸ್ ಶೋ ಇಂಡಿಯನ್ ಮ್ಯಾಚ್ಮೇಕಿಂಗ್ನಲ್ಲಿ ಕಾಣಿಸಿಕೊಂಡಿದ್ದರು.
ಕೆಲ ದಿನಗಳ ಹಿಂದೆ ಬೆಳಗ್ಗೆ ಆರು ಗಂಟೆ ವೇಳೆಗೆ ಕಂಪೆನಿ ಕಡೆಯಿಂದ ಬಂದ ಇಮೇಲ್ನಲ್ಲಿ ಕೆಲಸದಿಂದ ವಜಾಗೊಳಿಸಿರುವುದನ್ನು ತಿಳಿಸಲಾಗಿತ್ತು. ನನಗೆ ಅದನ್ನು ನೋಡಿ ನಿಜಕ್ಕೂ ಆಘಾತವಾಯಿತು. ಬ್ರೇಕಪ್ ಆದಂತೆಯೇ ಭಾಸವಾಯಿತು ಎಂದು ಗುಪ್ತಾ ಅಳಲು ತೋಡಿಕೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.