ಬೆಂಗಳೂರು, ಡಿ 09 ( DaijiworldNews/MS): ಯುವಜನತೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಸ್ಪಷ್ಟವಾದ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನೂತನ ’ಕರ್ನಾಟಕ ಯುವನೀತಿ-2022 ’ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಗುರುವಾರ ವಿಧಾನಸೌಧದಲ್ಲಿ ನಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 'ಕರ್ನಾಟಕ ಯುವ ನೀತಿ- 2022' ಕ್ಕೆ ಅನುಮೋದಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ.
ಯುವಜನತೆಗಾಗಿ ಪ್ರತ್ಯೇಕ ಯುವ ಸಬಲೀಕರಣ ನಿರ್ದೇಶನಾಲಯ, ತಾಲೂಕು ಮಟ್ಟದಲ್ಲಿ ಕಚೇರಿಗಳು, ಯುವ ಬಜೆಟ್, ಯುವ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆ,ಯುವಜನರಿಗೆ ಹಲವು ಪೂರಕ ತರಬೇತಿ ನೀಡುವುದು, ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ, ಉದ್ಯಮಿಗಳಿಗೆ ಆರ್ಥಿಕ ಬೆಂಬಲ, ಮಾರ್ಗದರ್ಶನ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ.
ಇದಲ್ಲದೆ ಮದ್ಯ, ತಂಬಾಕು, ಮಾದಕ ವಸ್ತು ಸೇವನೆಯಿಂದಾಗುವ ಹಾನಿ ಕುರಿತು ಯುವ ಜನತೆಗೆ ಜಾಗೃತಿ ಮೂಡಿಸುವುದು, ಡಿಜಿಟಲ್ ಚಟದಿಂದ ಮಕ್ಕಳು ಮತ್ತು ಯುವಜನರನ್ನು ಮುಕ್ತಗೊಳಿಸುವ ಬಗ್ಗೆ ಪೋಷಕರಲ್ಲಿಅರಿವು ಕಾರ್ಯಕ್ರಮ. ಸೇರಿ ಹತ್ತು ಹಲವು ಮಹತ್ವದ ಉದ್ದೇಶ 'ಕರ್ನಾಟಕ ಯುವ ನೀತಿ- 2022 ರಲ್ಲಿದೆ.
ಕರ್ನಾಟಕ ಯುವ ನೀತಿಯು ಎಂಟು ವರ್ಷಗಳ ಅವಧಿಗೆ ಅಂದರೆ 2030ರ ವರೆಗೆ ಕಾರ್ಯನಿರ್ವಹಿಸಲಿದೆ.