ಸಂಭಾಲ್(ಉತ್ತರ ಪ್ರದೇಶ), ಡಿ 08 (DaijiworldNews/DB): ವರನ ಮೂಗು ಚಪ್ಪಟೆಯಾಗಿರುವುದನ್ನು ಗಮನಿಸಿದ ವಧು ಮದುವೆಯನ್ನೇ ರದ್ದು ಮಾಡಿದ ಘಟನೆ ಉತ್ತರಪ್ರದೇಶದ ಸಂಭಾಲ್ನಲ್ಲಿ ನಡೆದಿದೆ.
ಅಸ್ಮೋಲಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯಲ್ಲಿ ಘಟನೆ ನಡೆದಿದೆ. ಡಿಸೆಂಬರ್ 7ರಂದು ಮದುವೆ ಹಿನ್ನೆಲೆಯಲ್ಲಿ ಮೆರವಣಿಗೆ ನಡೆದಿದ್ದು, ವರನನ್ನು ಮೆರವಣಿಗೆಯಲ್ಲಿ ಕರೆ ತರಲಾಗಿತ್ತು. ಈ ವೇಳೆ ಅಲ್ಲಿದ್ದ ಮಹಿಳೆಯೊಬ್ಬಳು ವರನ ಮೂಗು ಚಪ್ಪಟೆಯಾಗಿದೆ ಎಂದು ವಧುವಿಗೆ ಹೇಳಿದ್ದಾಳೆ. ಬಳಿಕ ವಧುವಿನ ಕಡೆಯವರೆಲ್ಲರೂ ವರನ ಮೂಗಿನ ವಿಷಯವಾಗಿ ಮಾತನಾಡಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ವಧು ಮದುವೆಯೇ ಬೇಡವೆಂದು ಹಠ ಹಿಡಿದಿದ್ದಾಳೆ.
ಮದುವೆ ಬೇಡವೆಂದು ವಧು ಹೇಳಿದ್ದರಿಂದ ವರನ ಕಡೆಯವರು ಆತಂಕಗೊಂಡು ಪಂಚಾಯ್ತಿ ಮಾಡಿದರು. ಮೂರು ಗಂಟೆ ಕಾಲ ಸಂಬಂಧಿಕರು ಮನವೊಲಿಸುವ ಪ್ರಯತ್ನ ಮಾಡಿದರೂ ವಧು ಹಠ ಬಿಡದ ಕಾರಣ ಮದುವೆ ರದ್ದುಗೊಂಡಿತು. ತಯಾರಿಸಿಟ್ಟ ಊಟವನ್ನೂ ಮಾಡದೆ ವರನ ಕಡೆಯವರು ವಾಪಸ್ಸಾದರು.