ಚಿಕ್ಕಮಗಳೂರು, ಡಿ 07 (DaijiworldNews/DB): ನನ್ನನ್ನು ಹಿಂದೂ ಹುಲಿ ಎನ್ನಬೇಕೇ ಹೊರತು ಮುಲ್ಲಾ ಎಂದು ಕರೆಯುವುದಕ್ಕಾಗುವುದಿಲ್ಲ. ಸ್ವಭಾವಕ್ಕೆ ತಕ್ಕಂತೆ ಬಿರುದುಗಳು ಬರುತ್ತವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಬಿಜೆಪಿ ನಾಯಕರ ಹೆಸರಿಗೆ ಮುಸ್ಲಿಂ ಹೆಸರನ್ನು ಹಾಕಿ ಕಾಂಗ್ರೆಸ್ ಟ್ವೀಟ್ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ನಾಯಕರ ಸ್ವಭಾವ ಅದೇ ರೀತಿ ಇದ್ದಲ್ಲಿ ಅವರು ಹಾಗೆ ಕರೆಯಲಿ. ಕುಂಕುಮ, ಕೇಸರಿ ನೋಡಿದರೆ ಆಗುವುದಿಲ್ಲವೆಂದಾದರೆ, ಮುಲ್ಲಾಗಳ ಮೇಲೆ ಪ್ರೀತಿ ಹೆಚ್ಚಿದ್ದರೆ ಅವರ ಆ ಹೆಸರುಗಳನ್ನಿಟ್ಟು ಕರೆಯಬಹುದು. ಆದರೆ ನನ್ನನ್ನು ಹಿಂದೂಹುಲಿ ಎನ್ನಬಹುದೇ ಹೊರತು ಮುಲ್ಲ ಎನ್ನುವುದಕ್ಕೆ ಆಗುವುದಿಲ್ಲ ಎಂದು ಕುಟುಕಿದರು.
ಶಾದಿ ಭಾಗ್ಯ, ದೇ ಆರ್ ಆಲ್ ಮೈ ಬ್ರದರ್ಸ್ ಎನ್ನುವವರಿಗೆ ಮುಲ್ಲಾ ಎನ್ನುವ ಹೆಸರು ಹೊಂದುತ್ತದೆ. ಬೆಂಕಿ ಹಾಕಿದವರನ್ನೂ ಅಮಾಯಕರು ಎನ್ನುವವರಿಗೆ ಆ ಹೆಸರು ಹೊಂದುತ್ತದೆ. ಕೇಸರಿ, ಕುಂಕುಮ ಬದಿಗೊತ್ತಿ ಟೋಪಿಯನ್ನು ಹಾಕಿಕೊಳ್ಳುವವರಿಗೆ ಆ ಹೆಸರು ಹೊಂದಿಕೆಯಾಗುತ್ತದೆ ಎಂದರು.
ಸ್ವಭಾವಕ್ಕೆ ತಕ್ಕಂತೆ ಬಿರುದುಗಳು ನಮಗೆ ಬರುತ್ತವೆ. ಆಡಳಿತ ಭಾಷೆಯಾಗಿ ಪರ್ಷಿಯನ್ ಭಾಷೆಯನ್ನು ಮಾಡಿದವನನ್ನು ಕನ್ನಡ ಪ್ರೇಮಿ ಎನ್ನುವುದಕ್ಕಾಗುತ್ತದೆಯೇ? ಒಂದು ವೇಳೆ ಹಾಗೆ ಹೇಳಿದರೆ ಅದು ಅಪಪ್ರಚಾರವಲ್ಲವೇ ಎಂದು ಪ್ರಶ್ನಿಸಿದರು.