ಕೊಲ್ಕತ್ತಾ, ಡಿ 03(DaijiworldNews//DB): ಟಿಎಂಸಿ ಹಿರಿಯ ಮುಖಂಡ ಅಭಿಷೇಕ್ ಬ್ಯಾನರ್ಜಿ ಅವರಿಗೆ ಸಂಬಂಧಿಸಿದ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಸ್ಪೋಟ ಸಂಭವಿಸಿ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ.
ಈ ಕುರಿತು ಶನಿವಾರ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕೊಂಟೈ ಪಟ್ಟಣದಿಂದ ಕೇವಲ 1.5 ಕಿಮೀ ದೂರದಲ್ಲಿರುವ ಭೂಪತಿನಗರ ಪ್ರದೇಶದಲ್ಲಿ ಸ್ಪೋಟ ಸಂಭವಿಸಿದೆ. ಅಭಿಷೇಕ್ ಬ್ಯಾನರ್ಜಿ ಸಂಬಂಧಿತ ಸಾರ್ವಜನಿಕ ಸಭೆ ಇಲ್ಲಿ ನಡೆಯುವುದರಲ್ಲಿತ್ತು. ಶುಕ್ರವಾರ ರಾತ್ರಿ 11-15ರ ವೇಳೆಗೆ ಸ್ಪೋಟ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಶನಿವಾರ ಬೆಳಗ್ಗೆ ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಪೋಟದ ತೀವ್ರತೆಗೆ ಹುಲ್ಲಿನ ಮನೆಯ ಛಾವಣಿ ಹಾರಿ ಹೋಗಿದೆ. ಸ್ಪೋಟಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ. ತನಿಖೆ ನಡೆಯುತ್ತಿದ್ದು, ವಿಧಿ ವಿಜ್ಞಾನ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ವಿವರಿಸಿರುವುದಾಗಿ ವರದಿಯಾಗಿದೆ.
ಇನ್ನು ಸ್ಪೋಟ ಪ್ರಕರಣಕ್ಕೆ ಟಿಎಂಸಿ ಪಕ್ಷವೇ ಹೊಣೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಘಟನೆ ಸಂಬಂಧ ಮೌನ ವಹಿಸಿರುವುದು ಯಾಕೆ ಎಂದು ಭಾರತೀಯ ಕಮ್ಯುನಿಸ್ಟ್ ಪಾರ್ಟಿ-ಮಾರ್ಕ್ಸ್ವಾದಿ ಹಿರಿಯ ನಾಯಕ ಸುಜನ್ ಚಕ್ರವರ್ತಿ ಪ್ರಶ್ನಿಸಿದ್ದಾರೆ.